ಮೈಸೂರು:ನೆರಳು ಬೆಳಕು ಗ್ಯಾಲರಿ, ಕಾಫಿ ಸಿಟಿಯಲ್ಲಿ ಸೆಪ್ಟಂಬರ್ 9 ರಿಂದ ಸೆಪ್ಟಂಬರ್ 17ರವರೆಗೆ “ಕೀಟಗಳ ಪ್ರಣಯ ಪ್ರಪಂಚ’’ -ಮ್ಯಾಕ್ರೋ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ.
09-09-2023ರ ಶನಿವಾರ ಸಂಜೆ 04 ಗಂಟೆಗೆ ವಿಜಯನಗರ 2ನೇ ಹಂತದ ಅಂಬರೀಷ್ ರಸ್ತೆಯಲ್ಲಿರುವ ನೆರಳು ಬೆಳಕು ಗ್ಯಾಲರಿ – ಕಾಫಿ ಸಿಟಿಯಲ್ಲಿ“ಕೀಟಗಳ ಪ್ರಣಯ ಪ್ರಪಂಚ’’ ಛಾಯಾಚಿತ್ರ ಪ್ರದರ್ಶನ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಂಡ್ಯ ನಿವೃತ್ತ ಪ್ರಾಂಶುಪಾಲರು ಹಾಗೂ ಛಾಯಾಗ್ರಾಹಕರಾದ ಲೀಲಾ ಅಪ್ಪಾಜಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮ್ಯಾಕ್ರೋ ಫೋಟೋಗ್ರಾಫರ್ ಗಿರೀಶ್ ಗೌಡ ಆಗಮಿಸಲಿದ್ದಾರೆ ಎಂದು ವಿನೋದ್ ಕುಮಾರ್ ವಿ ಕೆ ತಿಳಿಸಿದ್ದಾರೆ.
ಮನುಷ್ಯನು ಚಂದ್ರ ಮತ್ತು ಮಂಗಳಗ್ರಹ ತಲುಪಿದರೂ ಇಲ್ಲಿನ ಕೀಟಲೋಕ ಮಾತ್ರ ಇನ್ನೂ ಪೂರ್ತಿದಕ್ಕಿಲ್ಲ. ಭೂಮಿಯಲ್ಲಿರುವ ಎಲ್ಲ ಕೀಟಗಳ ಪಟ್ಟಿಮಾಡಲು ಸಾದ್ಯವಾಗಿಲ್ಲ. ನಮಗೆ ಗೊತ್ತಿರುವುದು ಕೇವಲ ಶೇಕಡ ಹತ್ತೊ ಇಪ್ಪತ್ತೊ ಅಷ್ಟೆ. ಮನುಷ್ಯನ ಕಡೆಗಣನೆ ಸಹಜವೇ ಆದರೂ ಅಲ್ಲಿನ ಕೌತುಕಗಳು ಬೆರಗು ಮೂಡಿಸುತ್ತವೆ.
ಕೀಟಗಳ ಬದುಕಿನ ಹತ್ತಾರು ವಿಷಯಗಳಲ್ಲಿ ಅವುಗಳ ಪ್ರಣಯ ಲೋಕವು ವಿಶೇಷವಾದದ್ದು. “ಕೀಟಗಳ ಪ್ರಣಯ ಪ್ರಪಂಚ” ವನ್ನು ಈ ಪ್ರದರ್ಶನದಲ್ಲಿ ಪ್ರಮುಖವಾಗಿ ತೆರೆದಿಡಲು ಪ್ರಯತ್ನಿಸಿದ್ದು, ಅವುಗಳ ರಸ ಕ್ಷಣಗಳ ಮೂಲಕ ಕೀಟಗಳ ಬಗ್ಗೆ ಕುತೂಹಲ ಬೆಳೆಸಲು ಒಂದು ಸಣ್ಣ ಪ್ರಯತ್ನ ಎಂದು ವಿನೋದ್ ಕುಮಾರ್ ವಿ ಕೆ ತಿಳಿಸಿದ್ದಾರೆ.


