ಶಿರಾ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ ಒಂದೆಡೆ ಬೀದಿನಾಯಿ ಮತ್ತೊಂದು ಕಡೆ ಕೋತಿ, ಬೀಡಾಡಿ ದನಗಳ ಉಪಟಳವೂ ಹೆಚ್ಚುತ್ತಿದ್ದು ಜನ ಹೈರಾಣಾಗುತ್ತಿದ್ದಾರೆ.
ನಗರದ ಪ್ರಮುಖ ರಸ್ತೆಯಲ್ಲಿ ಹಿಂಡು ಹಿಂಡಾಗಿ ಓಡಾಡುವ ಬೀದಿ ನಾಯಿಗಳಿಂದ ಸಂಚಾರಕ್ಕೂ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ಹಿರಿಯ ನಾಗರಿಕರು ಓಡಾಟ ನಡೆಸುವುದು ಕಷ್ಟವಾಗಿದೆ.
ನಗರಸಭೆ ಸಾಮಾನ್ಯ ಸಭೆಯಲ್ಲಿ ಹಲವು ಬಾರಿ ಚರ್ಚೆಗೆ ಬಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಬೀದಿನಾಯಿಗಳನ್ನು ಹಿಡಿಯಲು ಸಾಧ್ಯವಿಲ್ಲ, ಹಿಡಿದರೆ ಪ್ರಾಣಿ ದಯಾ ಸಂಘದವರು ಬರುತ್ತಾರೆ. ಆದ್ದರಿಂದ ಏನು ಮಾಡಲು ಸಾಧ್ಯವಿಲ್ಲ. ನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡುವುದರ ಮೂಲಕ ನಾಯಿಗಳ ಹೆಚ್ಚಳಕ್ಕೆ ಕಡಿವಾಣ ಹಾಕುವುದಾಗಿ ನಗರಸಭೆ ಅಧಿಕಾರಿಗಳು ಹೇಳುತ್ತಾರೆ.
ಒಂದು ಸಾವಿರ ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಿರುವುದಾಗಿ ನಗರಸಭೆ ಆಡಳಿತ ಲೆಕ್ಕ ನೀಡಿದರು ಸಹ ನಾಯಿಗಳ ಹಾವಳಿ ಕಡಿಮೆಯಾಗಿಲ್ಲ.
ಸಾಕು ನಾಯಿಗಳನ್ನು ಸಹ ಬೀದಿಗೆ ಬಿಡುವುದರಿಂದ ಸಮಸ್ಯೆ ಹೆಚ್ಚಾಗಿದೆ. ರಸ್ತೆಯಲ್ಲಿ ಮಕ್ಕಳು ಸೇರಿದಂತೆ ಹಿರಿಯರು ಕೈಯಲ್ಲಿ ಏನಾದರೂ ಹಿಡಿದುಕೊಂಡು ಹೋಗುವುದನ್ನು ಕಂಡರೆ ದಾಳಿ ನಡೆಸಿ ಗಾಯಗೊಳಿಸುತ್ತಿವೆ. ನಗರಸಭೆ ಆಡಳಿತ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC