ತುಮಕೂರು: ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ 119ನೇ ಜನ್ಮ ದಿನಾಚರಣೆಗೆ ಸಿದ್ಧಗಂಗಾ ಮಠವು ಸಂಪೂರ್ಣವಾಗಿ ಸಜ್ಜಾಗಿದೆ. ಬುಧವಾರ ನಡೆಯಲಿರುವ ಈ ಮಹೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸುತ್ತಿರುವುದು ಈ ಬಾರಿಯ ಆಚರಣೆಯ ವಿಶೇಷತೆಯಾಗಿದೆ.
ಜನ್ಮದಿನೋತ್ಸವದ ಅಂಗವಾಗಿ ಸಿದ್ಧಗಂಗಾ ಮಠದ ಆವರಣವನ್ನು ತಳಿರು ತೋರಣ ಮತ್ತು ಸ್ವಾಮೀಜಿಯವರ ಬೃಹತ್ ಕಟೌಟ್‌ಗಳಿಂದ ಶೃಂಗರಿಸಲಾಗಿದೆ. ನಾಡಿನ ಮೂಲೆ ಮೂಲೆಗಳಿಂದ ಸಹಸ್ರಾರು ಭಕ್ತರು ಈಗಾಗಲೇ ಮಠದತ್ತ ಆಗಮಿಸುತ್ತಿದ್ದು, ಎಲ್ಲೆಲ್ಲೂ ಶಿವಕುಮಾರ ಸ್ವಾಮೀಜಿಯವರ ನಾಮಸ್ಮರಣೆ ಮೊಳಗುತ್ತಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಬೆಳಿಗ್ಗೆ 11 ಗಂಟೆಗೆ ಮಠಕ್ಕೆ ಆಗಮಿಸಲಿದ್ದು, ಮಧ್ಯಾಹ್ನ 12:30ರ ವರೆಗೆ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಅವರು ಮಠದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ರಾಷ್ಟ್ರಪತಿಗಳ ಭೇಟಿಯ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ಬೆಳಿಗ್ಗೆ 10ರಿಂದ ಮಧ್ಯಾಹ್ನ 12:30ರ ವರೆಗೆ ಬಿ.ಎಚ್. ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಭಕ್ತರು ಮಠಕ್ಕೆ ತೆರಳಲು ಬಂಡೇಪಾಳ್ಯ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ.
ದಾಸೋಹ ವ್ಯವಸ್ಥೆ:
ಮಠಕ್ಕೆ ಬರುವ ಸಾವಿರಾರು ಭಕ್ತರಿಗಾಗಿ ಐದಾರು ಕಡೆಗಳಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸ್ವಯಂಸೇವಕರು ಸಜ್ಜಾಗಿದ್ದಾರೆ.
ಪ್ರಸ್ತುತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯುತ್ತಿರುವುದರಿಂದ, ಮಠದ ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗದಂತೆ ಮಠದ ಆಡಳಿತ ಮಂಡಳಿ ಎಚ್ಚರಿಕೆ ವಹಿಸಿದೆ. ಹೀಗಾಗಿ ಸಂಜೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ ಎಂದು ಸಿದ್ಧಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


