ತುಮಕೂರು: ‘ತ್ರಿವಿಧ ದಾಸೋಹಿ’, ‘ಕರ್ನಾಟಕ ರತ್ನ’, ಸಿದ್ದಗಂಗಾ ಮಠದ ಲಿಂಗೈಕ್ಯ ಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಶಿವಯೋಗಿಗಳ 7ನೇ ವರ್ಷದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ಜನವರಿ 21ರಂದು ಬೆಳಿಗ್ಗೆ 11 ಗಂಟೆಗೆ ಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ನಡೆಯಲಿದೆ.
ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ದಿವ್ಯ ನೇತೃತ್ವದಲ್ಲಿ ಈ ಸಮಾರಂಭ ಜರುಗಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಚಿಕ್ಕಬಳ್ಳಾಪುರದ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲದ ಸದ್ಗುರು ಶ್ರೀ ಮಧುಸೂದನ ಸಾಯಿ ಹಾಗೂ ಸಿದ್ದಗಂಗಾ ಮಠದ ಉತ್ತರಾಧಿಕಾರಿಗಳಾದ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ ವಹಿಸಲಿದ್ದಾರೆ.
ಗಣ್ಯರ ಉಪಸ್ಥಿತಿ: ಪುಣ್ಯ ಸ್ಮರಣೋತ್ಸವವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಉದ್ಘಾಟಿಸಲಿದ್ದು, ರಾಜ್ಯಪಾಲರಾದ ಥಾವರ್‌ಚಂದ್ ಗೆಹಲೋಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ವಿ. ಸೋಮಣ್ಣ ಮತ್ತು ರಾಜ್ಯದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಭಾಗವಹಿಸಲಿದ್ದಾರೆ.
ಸಿದ್ಧತಾ ಸಭೆ: ಕಾರ್ಯಕ್ರಮದ ಯಶಸ್ಸಿಗಾಗಿ ಕೇಂದ್ರ ಸಚಿವ ವಿ. ಸೋಮಣ್ಣ ಅವರ ನೇತೃತ್ವದಲ್ಲಿ ಮಠದ ಆಡಳಿತ ಕಚೇರಿಯಲ್ಲಿ ಪೂರ್ವಸಿದ್ಧತಾ ಸಭೆ ನಡೆಸಲಾಯಿತು. ಸಭೆಯಲ್ಲಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಉಪರಾಷ್ಟ್ರಪತಿಗಳ ಭೇಟಿಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಹಾಗೂ ವ್ಯವಸ್ಥೆಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಬಿ. ಸುರೇಶ್ ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಎಸ್.ಪಿ ಕೆ.ವಿ. ಅಶೋಕ್, ಸಿದ್ದಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ ಸೇರಿದಂತೆ ಪ್ರಮುಖ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


