ಶಿವಮೊಗ್ಗ: ಜಿಲ್ಲೆಯ ಸಕ್ರೆಬೈಲು ಸಮೀಪದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದಲ್ಲಿ ಶುಕ್ರವಾರ ನಸುಕಿನ ವೇಳೆ ಘೋರ ದುರಂತವೊಂದು ಸಂಭವಿಸಿದೆ. ದಿನನಿತ್ಯದ ತಪಾಸಣೆಯ ಭಾಗವಾಗಿ ನೀರಾನೆಯನ್ನು ಪರೀಕ್ಷಿಸಲು ತೆರಳಿದ್ದ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ (26) ಅವರು ನೀರಾನೆ ದಾಳಿಗೆ ಒಳಗಾಗಿ ಮೃತಪಟ್ಟಿದ್ದಾರೆ.
ಮೂಲತಃ ಬೆಂಗಳೂರಿನ ಬನ್ನೇರುಘಟ್ಟದವರಾದ ಡಾ.ಸಮೀಕ್ಷಾ ರೆಡ್ಡಿ ಅವರು ಇತ್ತೀಚೆಗಷ್ಟೇ ತ್ಯಾವರೆಕೊಪ್ಪ ಮೃಗಾಲಯಕ್ಕೆ ಪಶುವೈದ್ಯಾಧಿಕಾರಿಯಾಗಿ ನೇಮಕಗೊಂಡಿದ್ದರು. ಗುರುವಾರ ತಡರಾತ್ರಿ ಸುಮಾರು 11:30 ರ ಸುಮಾರಿಗೆ ಅವರು ಗರ್ಭಿಣಿಯಾಗಿದ್ದ ನೀರಾನೆಯ ಆರೋಗ್ಯ ತಪಾಸಣೆಗಾಗಿ ಅದರ ಆವರಣದ ಒಳಗೆ ತೆರಳಿದ್ದರು. ಈ ಸಂದರ್ಭದಲ್ಲಿ ನೀರಾನೆ ದಿಢೀರ್ ಎಂದು ಅವರ ಮೇಲೆ ದಾಳಿ ಮಾಡಿದೆ. ದಾಳಿಯ ತೀವ್ರತೆಗೆ ಸಮೀಕ್ಷಾ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣವೇ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಶಸ್ತ್ರಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಿಗ್ಗೆ ಸುಮಾರು 6:30ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ.
ಈ ದುರ್ಘಟನೆಯ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. “ಯುವ ವೈದ್ಯೆಯ ಸಾವು ಅತ್ಯಂತ ದುರದೃಷ್ಟಕರ. ಪ್ರತಿಯೊಂದು ಜೀವವೂ ಅಮೂಲ್ಯವಾದುದು” ಎಂದು ಅವರು ಹೇಳಿದ್ದಾರೆ. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿರುವ ಸಚಿವರು, ಏಳು ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಪಾಲಿಸಬೇಕಾದ ಸುರಕ್ಷತಾ ಕ್ರಮಗಳ (SOP) ಉಲ್ಲಂಘನೆಯಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲು ನಿರ್ದೇಶನ ನೀಡಲಾಗಿದೆ. ಅಲ್ಲದೆ, ಮೃತ ವೈದ್ಯೆಯ ಕುಟುಂಬಕ್ಕೆ ನಿಯಮಾನುಸಾರ ತಕ್ಷಣದ ಪರಿಹಾರ ಧನ ವಿತರಿಸಲು ಅವರು ಸೂಚಿಸಿದ್ದಾರೆ.
ಕರ್ತವ್ಯನಿಷ್ಠ ಮತ್ತು ಸೌಮ್ಯ ಸ್ವಭಾವದವರಾಗಿದ್ದ ಡಾ. ಸಮೀಕ್ಷಾ ಅವರ ಅಕಾಲಿಕ ನಿಧನದಿಂದ ಮೃಗಾಲಯದ ಸಿಬ್ಬಂದಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಕಂಬನಿ ಮಿಡಿದಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


