ನವದೆಹಲಿ: ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಮೊಣಕಾಲಿನ ಸಮಸ್ಯೆಗೆ ಒಳಗಾಗಿರುವ ಶೋಯೇಬ್ ಅಖ್ತರ್ ಆಸ್ಪತ್ರೆಗೆ ದಾಖಲಾಗಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ರೋಗಿಗಳ ಡ್ರೇಸ್ ಹಾಕಿಕೊಂಡು ಆಸ್ಪತ್ರೆಯ ಬೇಡ್ ಮೇಲೆ ಮಲಗಿರುವ ವಿಡಿಯೋವನ್ನು ಅಖ್ತರ್ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸದ್ಯ ಮೊಣಕಾಲಿನ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಅವರು ಶೀಘ್ರವೇ ಗುಣಮುಖರಾಗಲು ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್ನ ಆಸ್ಪತ್ರೆಗೆ ದಾಖಲಾಗಿರುವ 46 ವರ್ಷದ ಅಖ್ತರ್ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಎರಡೂ ಮೊಣಕಾಲಿಗೆ 5-6 ಗಂಟೆಗಳ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನೀವೆಲ್ಲರೂ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಬೇಕು. ಸದ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಶೀಘ್ರವೇ ಚೇತರಿಸಿಕೊಳ್ಳುವಂತೆ ನನಗಾಗಿ ನೀವು ಪ್ರಾರ್ಥಿಸಬೇಕೆಂದು ಅಖ್ತರ್ ಮನವಿ ಮಾಡಿಕೊಂಡಿದ್ದಾರೆ.
ಕ್ರಿಕೆಟ್‍ನಿಂದ ನಿವೃತ್ತಿಯಾಗಿ 11 ವರ್ಷ ಕಳೆದರೂ ನಾನು ಈಗಲೂ ಸಂಕಷ್ಟದಲ್ಲಿದ್ದೇನೆ. ನಾನು ಇನ್ನೂ ನಾಲ್ಕೈದು ವರ್ಷ ಆಡಬಹುದಿತ್ತು. ಆದರೆ ಹಾಗೆ ಮಾಡಿದರೆ ನಾನು ವೀಲ್ ಚೇರ್ ಮೇಲೆ ಇರಬೇಕಾಗುತ್ತಿತ್ತು. ಹೀಗಾಗಿ ನಾನು ಕ್ರಿಕೆಟ್‍ಗೆ ಗುಡ್ ಬೈ ಹೇಳಿದೆ ಎಂದು ಅಖ್ತರ್ ಹೇಳಿದ್ದಾರೆ.
ಪಾಕಿಸ್ತಾನ ಪರ ಅಖ್ತರ್ 46 ಟೆಸ್ಟ್, 163 ಏಕದಿನ ಮತ್ತು 15 T-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 178, ಏಕದಿನದಲ್ಲಿ 247 ಮತ್ತು ಟಿ-20ಯಲ್ಲಿ 19 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಇದೀಗ ತಮ್ಮ ಗಾಯದ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣಲು ಶಸ್ತ್ರಚಿಕಿತ್ಸೆಯ ಮೊರೆ ಹೋಗಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz