ಕೊರಟಗೆರೆ: ತಾಲ್ಲೂಕಿನ ಚನ್ನಾರಾಯನದುರ್ಗ ಹೋಬಳಿಯ ದಾಸಲುಕುಂಟೆ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಮತ್ತು 16 ನೇ ವರ್ಷದ ಮಡಿಲಕ್ಕಿ ಕಾರ್ಯಕ್ರಮ ಜರುಗಿತು. ಜಿಲ್ಲೆಯ ಹೆಸರಾಂತ ಕಲಾವಿದ ನಾಗಭೂಷಣ್ ಮತ್ತು ತಂಡದವರಿಂದ ಭಕ್ತಿಗೀತೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಬೆಳ್ಳಾವಿ ಕಾರದ ಮಠದ ಶ್ರೀವೀರ ಬಸವ ಮಹಾ ಸ್ವಾಮೀಜಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸ ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ ಮತ್ತು ಬೆಳ್ಳಾವಿ ಕಾರದ ಮಠದ ಶ್ರೀ ವೀರ ಬಸವಲಿಂಗ ಸ್ವಾಮೀಜಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದು ಗ್ರಾಮಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳಾದ ಚೈತ್ರ ಡಿ.ಆರ್., ಪ್ರಜ್ಞಾ ಡಿ.ಆರ್., ಚಂದ್ರು ಡಿ.ಎನ್., ಚಿತ್ರ, ತನುಶ್ರೀ, ಅನಿತಾ ರವರಿಗೆ ಶ್ರೀಗಳು ಸನ್ಮಾನಿಸಿ ಆಶೀರ್ವಾದ ನೀಡಿದರು.

ನಂತರ ಮಾತನಾಡಿದ ಬೆಳ್ಳಾವಿ ಕಾರದ ಮಠದ ಶ್ರೀಗಳಾದ ಶ್ರೀ ಶ್ರೀ ವೀರಬಸವ ಲಿಂಗ ಮಹಾಸ್ವಾಮಿಜಿಗಳು “ಇಡೀ ರಾಜ್ಯದಲ್ಲಿಯೇ ಹೆಣ್ಣು ಮಕ್ಕಳನ್ನು ಒಂದು ಕಡೆ ಸೇರಿಸಿ ಪ್ರತಿವರ್ಷವು ಅವರಿಗೆ ಅರಿಶಿನ ಕುಂಕುಮ ಕೊಟ್ಟು ಮಡಿಲಕ್ಕಿ ತುಂಬಿಸುವ ಕೆಲಸವನ್ನು ಸುಮಾರು 16 ವರ್ಷಗಳಿಂದ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ದಾಸಾಲಕುಂಟೆ ಗ್ರಾಮದ ಗ್ರಾಮಸ್ಥರು ಇಲ್ಲಿಯವರೆಗೂ ಮಾಡಿಕೊಂಡು ಬಂದಿದ್ದಾರೆ. ಮೊದಲ ಬಾರಿ ಕಾರ್ಯಕ್ರಮ ಮಾಡಿದಾಗ ರಾಜ್ಯ ಮಟ್ಟದಲ್ಲಿ ಈ ಕಾರ್ಯಕ್ರಮವು ಮನ್ನಣೆಯನ್ನು ಪಡೆದಿದ್ದು, ಇತಿಹಾಸ ಪುಟ ಸೇರುವ ಕಾರ್ಯಕ್ರಮ ಇದಾಗಿದ್ದು, ಇನ್ನು ಮುಂದೆಯೂ ತಪ್ಪದೇ ಈ ಕಾರ್ಯಕ್ರಮ ಹೆಚ್ಚು ಹೆಚ್ಚು ಆಗಲಿ” ಎಂದು ಆಶೀರ್ವದಿಸಿದರು.

ನಂತರ ಮಾತನಾಡಿದ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ “ಸುಮಾರು 16 ವರ್ಷಗಳಿಂದಲೂ ಸಹ ಗ್ರಾಮದ ಎಲ್ಲಾ ತಾಯಂದಿರಿಗೆ ಪ್ರತಿ ವರ್ಷವೂ ಕೂಡ ಅರಿಶಿನ ಕುಂಕುಮ ಕೊಟ್ಟು ಮಡಿಲಕ್ಕಿ ನೀಡುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿರುವ ಯಾವುದಾದರೂ ಒಂದು ಆದರ್ಶ ಗ್ರಾಮವಿದ್ದರೆ ಅದು ದಾಸಲುಕುಂಟೆ ಗ್ರಾಮ. ಈ ಜಗತ್ತಿನಲ್ಲಿ ತಾಯಿಯೇ ಮೊದಲ ದೇವರು ಅಂತಹ ತಾಯಂದಿರಿಗೆ ಮಡಿಲಲ್ಲಿ ನೀಡಿ ಶುಭ ಆರೈಸುವುದು ಮತ್ತು ಗ್ರಾಮದ ಪ್ರತಿಭಾನ್ವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮ ಆಯೋಜನೆ ಮಾಡಿರುವ ಸಂತಸದ ವಿಚಾರ” ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಮಯ್ಯ ನಿವೃತ್ತ ಶಿಕ್ಷಕ, ವಿರೇಗೌಡರು, ಗಂಗಾಧರ್, ಗ್ರಾಮ ಪಂಚಾಯಿತಿ ಸದಸ್ಯ ರಂಗರಾಜು, ಸಿದ್ಧರಾಜು, ಕುಮಾರ್, ರುದ್ರಯ್ಯ, ಆನಂದ್, ಆಶಾ, ಮಂಜುಳಾ, ಮಧು ಮತ್ತು ಊರಿನ ಮುಖಂಡರು ಗ್ರಾಮಸ್ಥರು ಸಾರ್ವಜನಿಕರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


