ಬೆಂಗಳೂರು: ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಶನಿವಾರ ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸಿದರು. ಅವರೊಂದಿಗೆ ಉಪ ಮುಖ್ಯಮಮತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೂ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಜತೆಗೆ ಎಂಟು ಮಂದಿ ಶಾಸಕರು ಸಚಿವರಾಗಿಯೂ ಪದಗ್ರಹಣ ಮಾಡಿದರು. ಇದರೊಂದಿಗೆ, ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಂತಾಗಿದೆ. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕಾಂಗ್ರೆಸ್ ನಾಯಕರು, ರಾಜ್ಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಬೆಂಬಲಿಗರು ಸೇರಿದಂತೆ ಲಕ್ಷಾಂತರ ಮಂದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾದರು.
ದೇವರ ಹೆಸರಿನಲ್ಲಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದರೆ, ಶ್ರೀ ಗಂಗಾಧರ ಅಜ್ಜನ ಹೆಸರಿನಲ್ಲಿ ಡಿಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಹಾಗೂ ಇತರರ ಉಪಸ್ಥಿತಿಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನೆರವೇರಿತು. ಜತೆಗೆ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್, ಬಿಹಾರ ಸಿಎಂ ನಿತೀಶ್, ಹಿಮಾಚಲಪ್ರದೇಶದ ಸಿಎಂ ಸುಖ್‌ವಿಂದರ್ ಸಿಂಗ್ ಸುಖು, ಪುದುಚೆರಿ ಸಿಎಂ ರಂಗಸ್ವಾಮಿ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಹಾಗೂ ಇನ್ನೂ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರು ಬಿಟ್ಟು ಉಳಿದವರು ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಆಗಮಿಸಿರಲಿಲ್ಲ. ಒಂದು ಹಂತದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪರ ಪ್ರಚಾರ ಕೈಗೊಳ್ಳುವುದಾಗಿ ಹೇಳಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ಸಹ ನಂತರ ಪ್ರಚಾರಕ್ಕೆ ಬಂದಿರಲಿಲ್ಲ. ಇದೀಗ ಅವರೆಲ್ಲ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


