ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ಟಿಪ್ಪು ಸುಲ್ತಾನ ಆಗುತ್ತಿದ್ದಾರೆ. ಹಿಜಾಬ್ ನಿಷೇಧ ಹಿಂತೆಗೆದುಕೊಳ್ಳುವುದು ಸೂಕ್ತ ಅಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಹಿಜಾಬ್ ನಿಷೇಧ ವಾಪಸ್ ಪಡೆಯುವ ವಿಚಾರದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಹಿಜಾಬ್ ನಿಷೇಧವನ್ನ ಬಿಜೆಪಿ ಮಾಡಿಲ್ಲ. ಶಾಲೆಯಲ್ಲಿ ಸಮಾನತೆ ಇರಲಿ ಅಂತಾ ಬಾಬಾಸಾಹೇಬ್ ಅಂಬೇಡ್ಕರ್ ಒಂದೇ ಸಮವಸ್ತ್ರದ ಕಾಯ್ದೆ ಮಾಡಿದ್ರು. ಈ ರೀತಿ ಅವರವರಿಗೆ ತಿಳಿದಿದ್ದನ್ನ ಅವರು ಧರಿಸಿ ಬರೋದಾದ್ರೆ, ನಾಳೆ ಹಿಂದೂಗಳು ಕೇಸರಿ ಶಾಲು, ಹಣೆಗೆ ತಿಲಕ ಇಟ್ಟುಕೊಂಡು ಬರುತ್ತಾರೆ. ಇದು ಸಂಘರ್ಷಕ್ಕೆ ಹಾದಿ ಆಗುತ್ತೆ ಎಂದು ಎಚ್ಚರಿಸಿದರು.
ಈ ರೀತಿ ಆದ್ರೆ ಶ್ರೀಮಂತರ ಒಳ್ಳೆಯ ಬಟ್ಟೆ, ಬಂಗಾರ ಹಾಕಿಕೊಂಡು ಬರುತ್ತಾರೆ. ಆಗ ಬಡ ಮಕ್ಕಳಿಗೆ ಹೇಗೆ ಅನಿಸುತ್ತೆ, ಬೇಜಾರಾಗುತ್ತೆ. ಹಿಂದೂಗಳು ಗೋಮಾಂಸ ತಿನ್ನಬಾರದು ಅಂತಾ ಇದೆ, ಅದಕ್ಕೆ ನಾವು ತಿನ್ನಲ್ಲ. ಮುಸ್ಲಿಮರು ಹಂದಿ ತಿನ್ನಬಾರದು ಅಂತಾ ಇದೆ, ಅದಕ್ಕೆ ಅವರು ತಿನ್ನಲ್ಲ. ತಿನ್ನುವುದರ ಬಗ್ಗೆ ಯಾರೂ ಏನೂ ಹೇಳಿಲ್ಲ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಸ್ಲಿಮರ ಪುಷ್ಟೀಕರಣಕ್ಕೆ ಸಿದ್ದರಾಮಯ್ಯ ನಿಂತಿದ್ದಾರೆ. ಲೋಕಸಭೆಯಲ್ಲಿ ಅವರೆಲ್ಲ ಇವರಿಗೆ ಮತ ಚಲಾಯಿಸ್ತಾರೆ ಎಂದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


