ಕಳೆದ ಹಲವು ವಾರಗಳಿಂದ ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಪ್ರವಚನಕಾರ, ನಡೆದಾಡುವ ದೇವರೆಂದೇ ಜನಪ್ರಿಯತೆಗಳಿಸಿದ್ದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ ಇಂದು ಸಂಜೆ ಲಿಂಗೈಕ್ಯರಾಗಿದ್ದಾರೆ.
ಬಿಎಲ್ ಡಿಇ ಸಂಸ್ಥೆಯ ಬಿ.ಎಂ.ಪಾಟೀಲ್ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ ನಲ್ಲಿ ಖ್ಯಾತ ವೈದ್ಯರ ತಂಡ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಅವರು ಲಿಂಗೈಕ್ಯರಾಗಿದ್ದಾರೆ.
ಸಿದ್ದೇಶ್ವರ ಸ್ವಾಮೀಜಿ 1941 ಅಕ್ಟೋಬರ್ 24ರಂದು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ್ದರು. ಇವರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನೂ ಘೋಷಣೆ ಮಾಡಿತ್ತು. ಆದರೆ ಇವರು ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದರು.
ಬಿಜ್ಜರಗಿ ಗ್ರಾಮದ ಶಾಲೆಯಲ್ಲಿಯೇ 4 ನೇ ತರಗತಿವರೆಗೆ ಓದಿದ ನಂತರ ಅವರು ವೇದಾಂತ ಕೇಸರಿ ಎಂದೇ ಪ್ರಖ್ಯಾತರಾಗಿದ್ದ ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮಿಗಳವರನ್ನು ಆಶ್ರಯಿಸಿದರು. ಬಾಲಕ ಚುರುಕುತನವನ್ನು ಗುರುತಿಸಿದ ಹಿರಿಯ ಶ್ರೀಗಳು ತಾವು ಪ್ರವಚನ ಮಾಡುವ ಸ್ಥಳಗಳಿಗೆ ಅವರು ಸಿದ್ದೇಶ್ವರರನ್ನು ಕರೆದೊಯ್ಯ ತೊಡಗಿದರು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು. ಸಿದ್ದೇಶ್ವರ ಶ್ರೀಗಳು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು.
ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದ ಸಿದ್ಧೇಶ್ವರ ಸ್ವಾಮಿಗಳವರ ನಿಧನಕ್ಕೆ ದೇಶದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಶ್ರೀಗಳವರ ಆರೋಗ್ಯ ವಿಚಾರಿಸಲು ಆಗಮಿಸಿದ್ದಾಗ ಪ್ರಧಾನಿ ಮೋದಿ ದೂರವಾಣಿ ಕರೆ ಮೂಲಕ ಶ್ರೀಗಳವರ ಆರೋಗ್ಯ ವಿಚಾರಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


