ಉತ್ತರ ಪ್ರದೇಶದ ಫತೇಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಆನ್ಲೈನ್ ಗೇಮಿಂಗ್ ಮೂಲಕ ಮಾಡಿದ ಸಾಲವನ್ನು ತೀರಿಸಲು ಯುವಕ ತನ್ನ ಸ್ವಂತ ತಾಯಿಯನ್ನು ಕೊಂದಿರುವ ಘಟನೆ ನಡೆದಿದೆ.
ಆರೋಪಿ ಹಿಮಾಂಶು ಆನ್ ಲೈನ್ ಗೇಮಿಂಗ್ ಚಟ ಹೊಂದಿದ್ದು, ಸ್ನೇಹಿತರಿಂದ ಸಾಲ ಪಡೆದು ಆಟ ಆಡುತ್ತಿದ್ದ. ಆಟ ಆಡಿ ಸುಮಾರು ನಾಲ್ಕು ಲಕ್ಷ ರೂಪಾಯಿ ಕಳೆದುಕೊಂಡಿದ್ದ. ಈ ನಡುವೆ ಸಾಲ ವಾಪಸ್ ನೀಡುವಂತೆ ಸಾಲ ನೀಡಿದವರು ಒತ್ತಡ ಹಾಕಲು ಆರಂಭಿಸಿದ್ದಾರೆ. ತಾಯಿಯನ್ನು ಕೊಂದರೆ, ವಿಮೆಯ ಹಣದಿಂದ ಸ್ನೇಹಿತರ ಸಾಲ ತುಂಬಬಹುದು ಎಂದು ಸಹೋದರನ ಚಿನ್ನಾಭರಣಗಳನ್ನು ಕದ್ದು ಅದನ್ನು ಮಾರಿ ಆ ಹಣದಲ್ಲಿ ತನ್ನ ತಂದೆ ತಾಯಿಯ ಹೆಸರಿನಲ್ಲಿ 50 ಲಕ್ಷ ರೂ.ಗಳ ಜೀವ ವಿಮಾ ಪಾಲಿಸಿ ಮಾಡಿಸಿಕೊಂಡಿದ್ದಾನೆ.
ನಂತರ ಯಾರು ಇಲ್ಲದ ವೇಳೆ ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಶವವನ್ನು ಸೆಣಬಿನ ಚೀಲದಲ್ಲಿ ಹಾಕಿ ಯಮುನಾ ನದಿಯಲ್ಲಿ ಎಸೆದಿದ್ದ ಎಂದು ಹೇಳಲಾಗಿದೆ. ಈ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ಮಗನೇ ತಾಯಿಯನ್ನು ಕೊಂದಿರೋದು ತಿಳಿದು ಬಂದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


