ತುಮಕೂರು: ಇಂದು ಜಿಲ್ಲಾಧಿಕಾರಿಗಳಾದ ವೈ.ಎಸ್.ಪಾಟೀಲ್ ಅಧ್ಯಕ್ಷತೆಯಲ್ಲಿ ತುಮಕೂರು ಜಿಲ್ಲೆಯ ನಗರ ವ್ಯಾಪ್ತಿ ಕೊಳಚೆ ಪ್ರದೇಶ ನಿವಾಸಿಗಳ ಮತ್ತು ನಿವೇಶನ ರಹಿತ ಕುಂದುಕೊರತೆ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ, ಮಾರ್ಚ್ 5 -2021ರಂದು ನಡೆದ ಸಭೆಯ ಅನುಪಾಲನಾ ವರದಿ ಮೇಲೆ ಇಲಾಖೆವಾರು ತೆಗೆದುಕೊಂಡ ಪರಿಹಾರೋಪಾಯಗಳ ಮೇಲೆ ಚರ್ಚಿಸಿ ಜಿಲ್ಲೆಯಲ್ಲಿರುವ ಆಘೋಷಿತ ಸ್ಲಂಗಳನ್ನು ನಿಗದಿತ ಕಾಲಮಿತಿಯೊಳಗೆ ಸ್ಲಂ ಕಾಯಿದೆ 1973 ಮತ್ತು ಸ್ಲಂ ನೀತಿ 2016ರ ಅನ್ವಯ ಸ್ಥಳೀಯ ಸಂಸ್ಥೆಗಳು ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿ ಸ್ಲಂ ಘೋಷಣೆಗೆ ಕ್ರಮವಹಿಸಲು ಸಭೆಯಲ್ಲಿ ಸೂಚಿಸಲಾಯಿತು.
ಸ್ಲಂ ಪ್ರದೇಶದ ನಿವೇಶನ ರಹಿತರಿಗೆ ಪ್ರತ್ಯೇಕವಾಗಿ ವಸತಿ ಸಮುಚ್ಛಯ ನಿರ್ಮಿಸಲು 4 ಎಕರೆ ಭೂಮಿ ಮೀಸಲು ಈ ಹಿಂದಿನ ಸಭೆಯಲ್ಲಿ ಸ್ಲಂಗಳಲ್ಲಿರುವ ನಿವೇಶನ ರಹಿತ 398 ಕುಟುಂಬಗಳಿಗೆ ಅಗತ್ಯವಿರುವ ಭೂಮಿಯ ಪ್ರಸ್ತಾವನೆ ಸಲ್ಲಿಸಲು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಸೂಚಿಸಲಾಗಿತ್ತು. ಅದರಂತೆ ದಿನಾಂಕ: 29-9-2021ರಂದು ಜಿಲ್ಲಾಧಿಕಾರಿಗಳಿಗೆ ಮಂಡಳಿಯಿಂದ ಪ್ರಸ್ತಾವನೆ ಸಲ್ಲಿಸಿ ನಗರ ಪ್ರದೇಶದಲ್ಲಿ 12 ಎಕರೆ ಅಥವಾ ಗ್ರಮೀಣ ಪ್ರದೇಶದಲ್ಲಿ 22 ಎಕರೆ ಭೂಮಿ ಅವಶ್ಯಕತೆ ಇರುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಹಾಗಾಗಿ ಜಿಲ್ಲಾಡಳಿತ ಭೂಮಿ ಮೀಸಲಿಡಲು ಕ್ರಮ ವಹಿಸಲು ಎ.ನರಸಿಂಹಮೂರ್ತಿ ಕೋರಿದರು. ಈ ಬಗ್ಗೆ ಚರ್ಚಿಸಿ ಈಗಾಗಲೇ ನಗರಪಾಲಿಕೆಗೆ 17 ಎಕರೆ ಭೂಮಿಯನ್ನು ನಿವೇಶನ ರಹಿತರಿಗೆ ವಸತಿ ನಿರ್ಮಿಸಲು ಹಸ್ತಾಂತರಿಸಿದ್ದು, ಈಗಿರುವ ಸರ್ಕಾರದ ಸುತ್ತೋಲೆಯಂತೆ ನಿವೇಶನ ನೀಡಲು ಸಾಧ್ಯವಿಲ್ಲ, ವಸತಿ ಸಮುಚ್ಛಯ ನೀಡಲು ಅವಕಾಶವಿರುವುದರಿಂದ ಕೊಳಚೆ ಪ್ರದೇಶಗಳಲ್ಲಿರುವ ನಿವೇಶನ ರಹಿತರಿಗೆ ಪ್ರತ್ಯೇಕವಾಗಿ ನಗರವ್ಯಾಪ್ತಿಯಲ್ಲಿ 4 ರಿಂದ 5 ಎಕರೆ ಭೂಮಿ ಮೀಸಲಿಡಲು ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ಆದೇಶಿಸಿದರು. 400 ಕುಟುಂಬಗಳಿಗೆ ವಸತಿ ಸಮುಚ್ಚಯ ನಿರ್ಮಿಸಲು ಮಹಾನಗರ ಪಾಲಿಕೆ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ಅಜಯ್, ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ, ನಗರಾಭಿವೃದ್ಧಿ ಕೋಶದ ನಿರ್ದೇಶಕರಾದ ಆಂಜಿನಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಯೋಗಾನಂದ್, ಕೊಳಗೇರಿ ಅಭಿವೃದ್ಧಿ ಮಂಡಳಿಯ ಇಂಜಿಯರ್ ಗಳಾದ ಲೋಕೇಶ್ವರಪ್ಪ, ಚೇತನ್, ನೀರು ಸರಬರಾಜು ಮಂಡಳಿ, ಹಿಂದುಳಿದ ವರ್ಗಗಳ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳಾದ ಎ.ನರಸಿಂಹಮೂರ್ತಿ, ಅರುಣ್ ಟಿ.ಜಿ., ತಿರುಮಲಯ್ಯ, ಜಾಬೀರ್, ರಂಗನಾಥ್, ಗಂಗಮ್ಮ, ಸುಧಾ, ಕೆಂಪಣ್ಣ ಮುಂತಾದವರು ಪಾಲ್ಗೊಂಡಿದ್ದರು.
ವರದಿ: ಉದಯ್ ಕುಮಾರ್, ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy