ಧಾರವಾಡ: ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಈ ಹಿಂದೆ ದಿನಪತ್ರಿಕೆ ಮತ್ತು ಟಿವಿ ಚಾನೆಲ್ ಗಳಲ್ಲಿ ಸೀಮಿತ ಅವಕಾಶವಿತ್ತು. ಇದೀಗ ಸಾಮಾಜಿಕ ಜಾಲತಾಣಗಳಿಂದ ನಿಜವಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬ ನಾಗರಿಕನಿಗೂ ಲಭಿಸಿದಂತಾಗಿದ್ದು, ನೈಜ ಪ್ರಜಾಪ್ರಭುತ್ವ ಸಾಧಿಸಿದಂತಾಗಿದೆ ಎಂದು ಕವಿವಿ ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಎ.ಎಸ್.ಬಾಲಸುಬ್ರಮಣ್ಯ ಅವರು ಅಭಿಪ್ರಾಯಪಟ್ಟರು.
ಅವರು ಇಂದು (ಮಾ.10) ಬೆಳಿಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮದ ವಿಭಾಗದ ಸಹಯೋಗದಲ್ಲಿ ಕವಿವಿ ಕನಕ ಅಧ್ಯಯನ ಪೀಠದ ಸಭಾಂಗಣದಲ್ಲಿ ಮೀಡಿಯಾ ಫೆಸ್ಟ್ 2026 ರ ಅಂಗವಾಗಿ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಪತ್ರಿಕೋದ್ಯಮದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ವಿಷಯಗಳ ವಿಶ್ವಾಸಾರ್ಹತೆ ವಿಷಯದ ಕುರಿತು ಮಾತನಾಡಿದರು.
ಪತ್ರಿಕೆ, ರೇಡಿಯೋ, ಟಿವಿ ಚಾನೆಲ್‍ಗಳಿಗಿಂತ ಸೋಷಿಯಲ್ ಮೀಡಿಯಾ ಈಗ ಜನಪ್ರಿಯವಾಗಿದೆ. ಅದರ ಮುಂದುವರಿದ ಭಾಗವಾಗಿ ಕೃತಕ ಬುದ್ಧಿಮತ್ತೆ, ರೋಬೋಟ್ ತಂತ್ರಜ್ಞಾನ ಪ್ರವರ್ಧಮಾನಕ್ಕೆ ಬಂದಿದೆ. ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಿಂದಾಗಿ ತಕ್ಷಣದ ಸಂವಹನ ಸಾಧ್ಯವಾಗಿದೆ. ಪ್ರತಿ ವ್ಯಕ್ತಿಯ ವ್ಯಕ್ತಿಗತ ಆಸಕ್ತಿಯ ಸುದ್ದಿಗಳನ್ನು ನೀಡಲಾಗುತ್ತಿದೆ. ವೃತ್ತಿ ಕೌಶಲ್ಯ ಮತ್ತು ನೈಪುಣ್ಯತೆ ಬೆಳೆಸಿಕೊಳ್ಳಲು ಎ.ಐ. ತಂತ್ರಜ್ಞಾನ ಮತ್ತು ಚಾಟ್ ಜಿಪಿಟಿ ಬಳಸಿಕೊಂಡು ಸ್ವಯಂ ಕಲಿತುಕೊಳ್ಳಲು ಅವರು ತಿಳಿಸಿದರು.
ಕೃತಕ ಬುದ್ಧಿಮತ್ತೆ (ಎಐ) ಎಲ್ಲಾ ವಿಷಯಗಳ ಬಗ್ಗೆ ಮಾಹಿತಿ ಒದಗಿಸುತ್ತದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮಾಧ್ಯಮಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಹೆಚ್ಚು ಪ್ರಯೋಜನಕಾರಿಯಾಗಿದೆ. ಸಿನಿಮಾದಲ್ಲಿ ವಾಯ್ಸ ಓವರ್ ಪ್ರಾಮುಖ್ಯತೆಯನ್ನು ಹೊಂದಿದೆ. ವಾಯ್ಸ ಓವರನಲ್ಲಿ ಸಹ ಸಾಕಷ್ಟು ಉದ್ಯೋಗಾವಕಾಶಗಳಿವೆ. ಡಬ್ಬಿಂಗ್ ಆರ್ಟಿಸ್ಟಗಳಿಗೆ ಸಂಪರ್ಕ ಮಾಡಿದಾಗ ಉದ್ಯೋಗಗಳು ದೊರೆಯಲಿವೆ. ಚಾಟ್ ಜಿಪಿಟಿ ಕ್ಷಣದಲ್ಲೇ ಮಾಹಿತಿಯನ್ನು ಒದಗಿಸುತ್ತದೆ. ತಂತ್ರಜ್ಞಾನವನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ಕಲಿಯಬೇಕಿದೆ. ಭಾಷಾ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪದ ಸಂಪತ್ತು ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪೆನ್ನು, ಬುಕ್ ಯಾವಾಗಲೂ ಇಟ್ಟುಕೊಳ್ಳಬೇಕು ಎಂದು ಅವರು ತಿಳಿಸಿದರು.
ಸೋಷಿಯಲ್ ಮೀಡಿಯಾಗಳು ಜನರಿಗೆ ಬಹಳ ಹತ್ತಿರವಾಗುತ್ತಿವೆ. ಕೃತಕ ಬುದ್ಧಿಮತ್ತೆ (ಎಐ)ಯನ್ನು ಅಭಿವೃದ್ಧಿ ಪಡಿಸುವಾಗ ಸುಮಾರು 2 ಕೋಟಿ ಪ್ರಶ್ನೆಗಳಿಗೆ ಉತ್ತರಿಸುವ ರೀತಿಯಲ್ಲಿ ಸೃಷ್ಟಿಸಲಾಗಿದೆ. ವಿಶ್ವದಾದ್ಯಂತ ಸೋಷಿಯಲ್ ಮೀಡಿಯಾಗಳ ಬಳಕೆ ಹೆಚ್ಚಳವಾಗಿದೆ. ಒಂದು ನಿಮಿಷದಲ್ಲಿ ಜಗತ್ತಿನ ಜೊತೆ ಸಂಭಾಷಣೆ ಮಾಡಬಹುದು. ಪ್ರಪಂಚದ ಶೇ.70 ರಷ್ಟು ಜನರು ಸೋಷಿಯಲ್ ಮೀಡಿಯಾಗಳಲ್ಲಿ ಮುಳುಗಿದ್ದಾರೆ. ಅಂತರ್ಜಾಲ ಬಳಕೆ ಮಾಡುವ ಶೇ.94 ರಷ್ಟು ಜನರು ಪ್ರತಿನಿತ್ಯ ಸುಮಾರು 2 ಗಂಟೆಗಳ ಕಾಲ ಸೋಷಿಯಲ್ ಮೀಡಿಯಾ ಬಳಕೆ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ವಾಟ್ಸಪ್, ಇನ್ಸ್ಟ್ರಾಗ್ರಾಂಗಳು ಜನರಿಗೆ ಅವಶ್ಯಕವಾದ ಮನರಂಜನೆ ನೀಡುವ ತಾಣಗಳಾಗಿವೆ. 300 ಕೋಟಿ ಜನರು ಫೇಸ್‍ಬುಕ್ ಬಳಸುತ್ತಾರೆ. ಸೋಷಿಯಲ್ ಮೀಡಿಯಾ ದಿನನಿತ್ಯದ ಜೀವನದಲ್ಲಿ ಅವಿಭಾಜ್ಯ ಅಂಗವಾಗಿದೆ ಎಂದರು.
ಭಾರತದಲ್ಲಿ ಸುಮಾರು 491 ಮಿಲಿಯನ್ ಜನರು ಸೋಷಿಯಲ್ ಮೀಡಿಯಾ ಬಳಕೆ ಮಾಡುತ್ತಿದ್ದಾರೆ. ಶೇ. 33.7 ರಷ್ಟು ಜನರು ಸೋಷಿಯಲ್ ಮಿಡಿಯಾ ಬಳಸುತ್ತಿದ್ದಾರೆ. ಕೋವೀಡ್ ಕಾಲದಲ್ಲಿ ಸೋಷಿಯಲ್ ಮೀಡಿಯಾಗಳ ಬಳಕೆ ಹೆಚ್ಚಾಯಿತು. ಜನರು ವಾಟ್ಸಾಪ್ ಮೂಲಕ ಗುಂಪುಗಳನ್ನು ರಚಿಸಿ ಸಂಭಾಷಣೆ ನಡೆಸುತ್ತಿರುವರು. ಭಾರತದಲ್ಲಿ 1 ಬಿಲಿಯನ್ ಜನರು ಅಂತರ್ಜಾಲವನ್ನು ಬಳಕೆ ಮಾಡುತ್ತಿದ್ದಾರೆ. ಯೂಟ್ಯೂಬ್ ಮೂಲಕ ಕ್ಷಣ ಮಾತ್ರದಲ್ಲಿ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯೂಟ್ಯೂಬ್‍ನಲ್ಲಿ ಲೈವ್ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಪುಸ್ತಕಗಳನ್ನು ಓದುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ದಿನಪತ್ರಿಕೆಗಳು ಸಹ ಡಿಜಿಟಲ್ ಮಾಧ್ಯಮಗಳಾಗಿ ಬದಲಾವಣೆ ಮಾಡಿಕೊಂಡಿವೆ. ಆ ಮೂಲಕ ವೆಬ್‍ಸೈಟ್‍ನಲ್ಲಿ ಸುದ್ದಿಗಳನ್ನು ಬಿತ್ತರಿಸುತ್ತಿವೆ. ದಿನಪತ್ರಿಕೆಗಳ ಮುಂಚಿತವಾಗಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತವೆ. ಡಿಜಿಟಲ್ ಜಾಹೀರಾತುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ದಿನಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾದ ನಂತರ ಟಿವಿ, ರೇಡಿಯೋ, ಬ್ಯಾನರ್‍ಗಳ ಮೂಲಕ ತಿಳಿದುಕೊಳ್ಳಲಾಗುತ್ತದೆ. ಆದರೆ ಇಂದು ಎಲ್ಲವೂ ಬದಲಾಗಿದೆ ಎಂದರು.
ಹಿರಿಯ ಪತ್ರಕರ್ತರಾದ ಸುಭಾμï ಹೂಗಾರ ಅವರು ಪತ್ರಿಕೋದ್ಯಮ ಮತ್ತು ನವ ತಂತ್ರಜ್ಞಾನ ಬಳಕೆ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಪತ್ರಿಕಾ ರಂಗ ಹೆಚ್ಚು ಬದಲಾವಣೆಗಳನ್ನು ಕಂಡಿದೆ. ಪತ್ರಕರ್ತರಾಗಲು ಪತ್ರಿಕೋದ್ಯಮ ಪದವಿ ಅವಶ್ಯಕವಾಗಿಲ್ಲ. ಪತ್ರಿಕೋದ್ಯಮಕ್ಕೆ ಅವಶ್ಯಕವಾಗಿರುವ ಕೌಶಲ್ಯಗಳನ್ನು ಹೊಂದಿದವರು ಪತ್ರಕರ್ತರಾಗಬಹುದು. ಪತ್ರಕರ್ತರು ಕೃತಕ ಬುದ್ಧಿಮತ್ತೆಯನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನು ಅರಿತುಕೊಳ್ಳಬೇಕಿದೆ. ಇಲ್ಲವಾದರೆ ಪತ್ರಕರ್ತರ ಅಸ್ತಿತ್ವ ಉಳಿಯಲು ಸಾಧ್ಯವಿಲ್ಲ. ಆನ್‍ಲೈನ್ ಲೈವ್ ಮೂಲಕ ಕಾರ್ಯಕ್ರಮಗಳನ್ನು ನೇರವಾಗಿ ವೀಕ್ಷಿಸಬಹುದು. ಎಐ ನೀಡಿದ ಮಾಹಿತಿಯನ್ನು ಎಂಟು ಜನರಲ್ಲಿ ಒಬ್ಬರೂ ಮಾತ್ರ ನಂಬುತ್ತಾರೆ. ಯುಟ್ಯೂಬರ್‍ಗಳು ಪ್ರತಿ ಗಲ್ಲಿಗಳಲ್ಲಿ ಸಹ ಸಿಗುತ್ತಾರೆ. ಅಷ್ಟರಮಟ್ಟಿಗೆ ಯೂಟ್ಯೂಬ್ ಬೆಳವಣಿಗೆ ಕಂಡಿದೆ. ವಿದ್ಯಾರ್ಥಿಗಳು ಅವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಬಸವರಾಜ ಕಂಬಿ, ವಾರ್ತಾ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಕನ್ನಡಪ್ರಭ ಪತ್ರಿಕೆಯ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣವರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಸಂಜಯಕುಮಾರ ಮಾಲಗತ್ತಿ ಹಾಗೂ ವಿವಿಧ ಮಾಧ್ಯಮ ಪ್ರತಿನಿಧಿಗಳು, ವಿವಿಧ ಪತ್ರಿಕೋದ್ಯಮ ಕಾಲೇಜುಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ವಾರ್ತಾ ಇಲಾಖೆಯ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಡಾ.ಪ್ರಭಾಕರ ಕಾಂಬಳೆ ಸ್ವಾಗತಿಸಿದರು. ಡ್ಯಾನಿಯಲ್ ಮತ್ತು ದಿನೇಶ ಗೌಡ ಪರಿಚಯಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


