ಮೈಸೂರು: ಸೋಮಾರಿ ಸಿದ್ದ ಎಂಬ ಪದ ಬಳಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಳಕೆ ಮಾಡಿರುವ ವಿಚಾರವಾಗಿ ಭಾರೀ ಆಕ್ರೋಶ ಹೊರಬಂದ ಬಳಿಕ ಸಂಸದ ಪ್ರತಾಪ್ ಸಿಂಹ ಯುಟರ್ನ್ ಹೊಡೆದಿದ್ದಾರೆ.
ಫೇಸ್ ಬುಕ್ ಲೈವ್ ನಲ್ಲಿ ಈ ಬಗ್ಗೆ ಮಾತನಾಡಿದ ಸಂಸದರು, ಸೋಮಾರಿ ಸಿದ್ದ ಅಂತಾ ನಾನು ಬಳಸಿದ್ದು, ಸಿದ್ದರಾಮಯ್ಯ ಅವರಿಗೆ ಅಲ್ಲ. ಸೋಮಾರಿ ಸಿದ್ದ ಅನ್ನೋದು ನಾಮ ಪದವಲ್ಲ. ಅದು ಒಂದು ಸಂದರ್ಭ ವಿವರಿಸುವ ನಾಣ್ನುಡಿ ಅಷ್ಟೇ ಎಂದು ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದರು.
ಕಲ್ಲು ಬಿಸಾಡಿದರೆ ಹಣ್ಣು ಕೊಡೋಕೆ ನಾನು ಮಾವಿನ ಮರ ಅಲ್ಲ, ನಾನು ಪ್ರತಾಪ್ ಸಿಂಹ. ನೀವು ಕಲ್ಲು ಬಿಸಾಕಿದರೆ ನಾನು ಕೂಡ ಕಲ್ಲೇ ಬಿಸಾಕುತ್ತೇನೆ ಎಂದು ಹೇಳುವ ಮೂಲಕ ವಿರೋಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರೇ ನೀವು ಮಹಾರಾಜರನ್ನ, ಪ್ರಧಾನಿ ಮೋದಿ, ದೇವೇಗೌಡರು ಮತ್ತು ಯಡಿಯೂರಪ್ಪ ಅವರನ್ನು ಏಕವಚನದಲ್ಲೇ ಸಂಬೋಧನೆ ಮಾಡುತ್ತಿರಿ. ಕಾಂಗ್ರೆಸ್ ಸೇರುವ ಮುನ್ನಾ ಸೋನಿಯಾ ಗಾಂಧಿಯವರನ್ನು ಏಕವಚನದಲ್ಲಿ ಕರೆದವರು ನೀವು. ನಿಮ್ಮಿಂದ ನನಗೆ ಬಹುವಚನ – ಏಕವಚನದ ಪಾಠ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.


