ಗುಬ್ಬಿ: ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ದಲಿತ ಯುವಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ಪ್ರತಿನಿಧಿಯಾಗಿ ಯಾವ ರಾಜಕಾರಣಿ ಸೌಜನ್ಯಕ್ಕಾದರೂ ಭೇಟಿ ನೀಡದೇ ನಿರ್ಲಕ್ಷ್ಯ ತೋರಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಕಿಡಿಕಾರಿದರು.
ತಾಲ್ಲೂಕಿನ ಕಡಬ ಹೋಬಳಿ ಪೆದ್ದನಹಳ್ಳಿ ಗ್ರಾಮದಲ್ಲಿ ಹತ್ಯೆಯಾದ ಗಿರೀಶ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರ ಸಂತೈಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಮೂವರು ಮಂತ್ರಿಗಳಿದ್ದು ಈ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಲಕ್ಷ್ಯ ವಹಿಸಿದ್ದು ತೀರ ಖಂಡನೀಯ. ಈ ಜೊತೆಗೆ ಸ್ಥಳೀಯ ಶಾಸಕರೂ ಇತ್ತ ಕಡೆ ಸುಳಿಯದಿರುವುದು ಅವರ ಬೇಜವಾಬ್ದಾರಿ ತೋರುತ್ತದೆ ಎಂದು ಕಿಡಿಕಾರಿದರು.
ಪೂರ್ವ ನಿಯೋಜಿತ ಹತ್ಯೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇಷ್ಟಾದರೂ ಬಿಜೆಪಿ ಸರ್ಕಾರ ಇಂತಹ ಅಮಾನವೀಯ ಕೃತ್ಯದ ಬಗ್ಗೆ ಮಾತನಾಡದಿರುವುದು ಅವರ ದಲಿತ ವಿರೋಧಿತನ ಪ್ರದರ್ಶನವಾಗುತ್ತಿದೆ. ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣದಲ್ಲಿ ಇಡೀ ಸರ್ಕಾರವೇ ಅಲ್ಲಿತ್ತು. ಆದರೆ ಇಲ್ಲಿ ಬಡ ದಲಿತರ ಕೊಲೆ ಬಗ್ಗೆ ನಿರಾಸಕ್ತಿ ತೋರುತ್ತಿರುವ ಬಿಜೆಪಿ ಸರ್ಕಾರ ಮೊದಲು ಇತ್ತ ಕಡೆ ಗಮನಹರಿಸಿ ಹತ್ಯೆಯಾದ ಯುವಕರ ಕುಟುಂಬಕ್ಕೆ ತಲಾ 25 ಲಕ್ಷ ರೂಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸಂತ್ರಸ್ತ ಕುಟುಂಬಕ್ಕೆ ಸುರಕ್ಷತೆ ನೀಡಬೇಕಾದ ಅನಿವಾರ್ಯವಿದೆ. ಈಗಾಗಲೇ ಹತ್ಯೆಯಾದ ಗಿರೀಶ್ ಸೋದರ ಶ್ರೀಧರ್ ಗೆ ಅಲ್ಲಿನ ಸ್ಥಳೀಯ ಜನ ಪ್ರತಿನಿಧಿಗಳು ಒತ್ತಡ ಹೇರುತ್ತಿದ್ದಾರೆ. ಭಯ ಮೂಡಿಸುವ ಕೆಲಸ ನಡೆದಿದೆ. ಶಾಸಕರು ಕರೆಯುತ್ತಿದ್ದಾರೆ ಎಂದು ಹೇಳಿ ಬೆದರಿಕೆ ಹಾಕಿರುವುದು ಸಹ ಅನುಮಾನಕ್ಕೆ ದೂಡಿದೆ ಎಂದ ಅವರು ಶೋಷಿತರ ಮೇಲೆ ನಡೆಯುವ ದೌರ್ಜನ್ಯ ತಡೆಯೊಡ್ಡಬೇಕಿದೆ. ಜಾತಿ ಹೊರತಾಗಿ ಮಾನವೀಯತೆ ಮೆರೆದು ಸರ್ಕಾರ ತಮ್ಮ ಕರ್ತವ್ಯ ತೋರಬೇಕಿದೆ. ಜೊತೆಗೆ ಭಯ ಮುಕ್ತ ವಾತಾವರಣ ಸೃಷ್ಟಿಸಿ ಮೃತರ ಕುಟುಂಬಕ್ಕೆ ಸುರಕ್ಷತೆ ನೀಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಪರಮೇಶ್, ದಲಿತ ಸಂಘರ್ಷ ಸಮಿತಿಯ ಜಿ.ಸಿ.ನರಸಿಂಹಮೂರ್ತಿ, ಚೇಳೂರು ಶಿವನಂಜಪ್ಪ, ಕೊಡಿಯಾಲ ಮಹದೇವು, ನಾಗಭೂಷಣ್, ನಾಗರಾಜ್, ಸಾಕಸಂದ್ರ ದೇವರಾಜ್, ಕಲ್ಲೂರು ಗ್ರಾಪಂ ಅಧ್ಯಕ್ಷ ರವಿಕುಮಾರ್, ಯತೀಶ್ ಇತರರು ಇದ್ದರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5