ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆ ಆಗಿದ್ದು, ಸದ್ಯದಲ್ಲೇ ಅಭ್ಯರ್ಥಿಗಳ ಕುರಿತು ಸಂಸದೀಯ ಮಂಡಳಿ ತೀರ್ಮಾನ ಮಾಡಲಿದೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಹಾಗೂ ರಾಜ್ಯದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ʻಜಗನ್ನಾಥ ಭವನʼದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಭ್ಯರ್ಥಿಗಳ ಘೋಷಣೆಯಾದ ನಂತರ ಚುನಾವಣೆ ಮುಗಿಯುವವರೆಗೆ ರಾಜ್ಯದ ಎಲ್ಲ ಕ್ಷೇತ್ರಗಳಿಗೆ ನಾನು, ನಮ್ಮ ಸಂಸದರು ಪ್ರವಾಸ ಮಾಡಲಿದ್ದೇವೆ ಎಂದು ಹೇಳಿದರು.
ಸೂರ್ಯ-ಚಂದ್ರರು ಇರುವುದು ಎಷ್ಟು ಸತ್ಯವೋ, ಅಷ್ಟೇ ಖಚಿತವಾಗಿ ನಾವು ಸ್ಪಷ್ಟ ಬಹುಮತದೊಂದಿಗೆ ಈ ಚುನಾವಣೆಯಲ್ಲಿ ಸರ್ಕಾರ ರಚಿಸುತ್ತೇವೆ. ನರೇಂದ್ರ ಮೋದಿ, ಅಮಿತ್ ಶಾ ಅವರಂತಹ ನಾಯಕರು ಬಿಜೆಪಿಯಲ್ಲಿದ್ದು, ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಗಳಿಗೆ ದೇವದುರ್ಲಭ ಸ್ವಾಗತ ಲಭಿಸುತ್ತಿದೆ. 4 ತಂಡಗಳ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ, ಸಾರ್ವಜನಿಕ ಸಭೆಗಳಲ್ಲಿ ಸೇರಿದ ಜನರನ್ನು ಗಮನಿಸಿ ಕಾಂಗ್ರೆಸ್‍ನವರು ದಿಗ್ಭ್ರಾಂತರಾಗಿದ್ದಾರೆ. ಜನ ಇವತ್ತು ಮೋದಿಜಿ, ಬಿಜೆಪಿ ಪರ ಇದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ನಮ್ಮೆಲ್ಲ ಸಂಸದರು, ರಾಜ್ಯಸಭಾ ಸದಸ್ಯರು ಚುನಾವಣೆ ಮುಗಿಯುವವರೆಗೆ ಸ್ವಕ್ಷೇತ್ರದಲ್ಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸುವಂತೆ ತಿಳಿಸಿದ್ದಾರೆ. ಅದರಂತೆ ಕೆಲಸ ಪ್ರಾರಂಭ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA