ಮೊನ್ನೆಯಷ್ಟೇ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಅವರು ಬೆಲೆ ಬಾಳುವ ಹೊಸ ಕಾರು ಖರೀದಿಸಿ ಭಾರಿ ಸುದ್ದಿಯಾಗಿದ್ದರು. ಇದೀಗ ಸ್ಪೀಕರ್ ಯು.ಟಿ. ಖಾದರ್ ಅವರ ಪ್ರಯಾಣಕ್ಕಾಗಿ ಸರಕಾರದಿಂದ ಐಶಾರಾಮಿ ಕಾರು ಬಂದಿದೆ. ಸಚಿವಾಲಯದಿಂದ ವಿಶೇಷ ಕಾರಿನ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಐಶಾರಾಮಿ ಫಾರ್ಚೂನರ್ ಕಾರು ಹಲವು ವಿಶೇಷತೆಗಳನ್ನು ಕೂಡಾ ಹೊಂದಿದೆ.
ನೋಡೋ ಹೊತ್ತಿಗೆ ಆಕರ್ಷಕವಾಗಿ ಕಾಣುವ ಈ ಐಶಾರಾಮಿ ಕಾರು, 360 ಡಿಗ್ರಿ ಕ್ಯಾಮೆರಾ ಹಾಗೂ ಪ್ರಯಾಣದ ಸಂದರ್ಭದಲ್ಲಿ ಸ್ಪೀಕರ್ ಖಾದರ್ ಮುಖಕ್ಕೆ ಬೆಳಕು ನೀಡುವ ವಿಶೇಷ ಎಲ್ ಇ ಡಿ ಲೈಟ್ ಸೌಲಭ್ಯ ಹೊಂದಿದೆ. ಈ ಫಾರ್ಚೂನರ್ ಗೆ ವಿಶೇಷ ವಿನ್ಯಾಸ ಮಾಡಿರುವುದರಿಂದ ಒಟ್ಟು 41 ಲಕ್ಷ ರೂ. ವೆಚ್ಚವಾಗಿದೆ ಎಂದು ತಿಳಿದುಬಂದಿದೆ.
ಕಾರಿಗೆ ಜಿಆರ್ ಕಿಟ್ ಅಳವಡಿಸುವ ಮೂಲಕ ವಿಶೇಷ ವಿನ್ಯಾಸ ಮಾಡಲಾಗಿದೆ. ಇನ್ನು ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಗಂಡಭೇರುಂಡ ಲಾಂಛನ ಹೊಂದಿದೆ. ರಾಜ್ಯಪಾಲರಿಗೆ ಹೊರತಾಗಿ ಸ್ಪೀಕರ್ ಗೆ ಮಾತ್ರ ಇದನ್ನು ಹಾಕಲು ಅವಕಾಶ ಇದೆ. ಇತ್ತೀಚೆಗೆ ರಾಜ್ಯ ಸರ್ಕಾರದ ಎಲ್ಲಾ ಸಚಿವರಿಗೆ ಐಶಾರಾಮಿ ಕಾರನ್ನು ನೀಡಲಾಗಿತ್ತು. ಇದೀಗ ಸ್ಪೀಕರ್ ಯು.ಟಿ. ಖಾದರ್ ಅವರಿಗೂ ಈ ಐಶಾರಾಮಿ ಕಾರು ಬಂದಿದ್ದು, ಕರ್ನಾಟಕ ವಿಧಾನಸಭೆ ಎಂದು ಎದುರು ಭಾಗದಲ್ಲಿ ಬರೆಯಲಾಗಿದೆ.


