ಸರಗೂರು: ತಾಲೂಕಿನ ಅದಿ ದೇವತೆ ಚಿಕ್ಕದೇವಮ್ಮನ ಬೆಟ್ಟದಲ್ಲಿ ಶುಕ್ರವಾರ ನಾಲ್ಕನೇ ಆಷಾಡ ಮಾಸದ ವಿಶೇಷ ಪೂಜೆ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.
ಬೆಟ್ಟದ ಚಿಕ್ಕದೇವಮ್ಮ ದೇವಿಯನ್ನು ಮುತ್ತಿನ ಅಲಂಕಾರಗೊಳಿಸಿ, ನಿಂಬೆಹಣ್ಣು, ವಿವಿಧ ಹೂವುಗಳಿಂದ ಅಲಂಕೃತಗೊಳಿಸಲಾಗಿತ್ತು. ಬೆಳಗ್ಗೆ 6 ಗಂಟೆಯಿಂದಲೇ ದೇವಿಗೆ ಮಹಾನ್ಯಾಸ ಪೂರ್ವಕ, ಶ್ರೀಸೂಕ್ತ ಪಾರಾಯಣ, ಸಹಸ್ರನಾಮರ್ಚನೆ, ಪಂಚಾಮೃತಾಭಿಷೇಕ, ಹೋಮ–ಹವನ ಸೇರಿದಂತೆ ನಾನಾ ಪೂಜಾ ಕಾರ್ಯಕ್ರಮ ನೆರವೇರಿಸಿ ನಂತರ ದೇವಾಲಯದ ಸುತ್ತ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು.
ಆಷಾಡದ ನಾಲ್ಕನೇ ಕೊನೆಯ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾದರು. ನವ ವಧು–ವರರು ಬೆಟ್ಟಕ್ಕೆ ಆಗಮಿಸಿ, ಮುಂದಿನ ಬದುಕು ಬಂಗಾರವಾಗಲಿ ಎಂದು ಹರಸಿ, ದೇವಿಗೆ ವಿಶೇಷ ಪೂಜೆ ನೆರವೇರಿಸಿದರು.
ಬೆಳಗ್ಗೆಯೇ ದೇವರ ಉತ್ಸವಮೂರ್ತಿಯನ್ನು ಪ್ರಕಾರೋತ್ಸವ ಮಾಡಲಾಯಿತು. ಕುಂಕುಮಾರ್ಚನೆ ನೆರವೇರಿಸಲಾಯಿತು. ನಂತರ ರಾಜೋಪಚಾರ ಪೂಜೆ ನಡೆಯಿತು. ಭಕ್ತರಿಗೆ ಸಿಹಿ ವಿತರಣೆ ಮಾಡಲಾಯಿತು.
ಇದಲ್ಲದೆ ದೇವಿಯ ಎದುರುಗಡೆ ಇರುವ ಕಾಲಭೈರವೇಶ್ವರಸ್ವಾಮಿಗೆ ಹೂವಿನ ಅಲಂಕಾರಗೊಳಿಸಲಾಗಿತ್ತು. ಅದೇ ರೀತಿ ಭೀಮೇಶ್ವರನಿಗೂ ವಿಶೇಷವಾಗಿ ಸಿಂಗಾರಿಸಿ, ಪೂಜೆ ನೆರವೇರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಪಾರುಪತ್ತೇದಾರರಾದ ಶಾಂತಿಪುರ ಮಹದೇವಸ್ವಾಮಿ, ಆರ್ಚಕರಾದ ಪ್ರಸನ್ನ ಕುಮಾರ್, ದೇವಣ್ಣ, ಸಂತೋಷ್, ಮನೋಹರ್, ಚಿಕ್ಕದೇವಣ್ಣ, ಸಿದ್ದಲಿಂಗಸ್ವಾಮಿ, ಶಿವಕುಮಾರ್, ನಿಂಗರಾಜು, ನಿಂಗಣ್ಣ ಲಿಂಗಪ್ಪ, ಮಣಿ, ಮನು, ನಿಂಗರಾಜು, ನಿಂಗಣ್ಣ, ಕೃಷ್ಣ,ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC