ಬೆಳಗಾವಿ: ಸರ್ಕಾರಿ ಜಮೀನು ಒತ್ತುವರಿ ಗುರುತಿಸಲು ರಾಜ್ಯ ಸರ್ಕಾರ ತಂತ್ರಜ್ಞಾನ ಬಳಸಲಿದ್ದು, ಜಿಪಿಎಸ್ ಬಳಸಿ ಜಮೀನುಗಳ ಮಾಲೀಕತ್ವವನ್ನು ಗುರುತಿಸಲು ಸಹಾಯ ಮಾಡುವ ಮೊಬೈಲ್ ಆ್ಯಪ್ ‘Beat’ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದೆ.
ವಿಧಾನ ಪರಿಷತ್ ನಲ್ಲಿ ಬುಧವಾರ ಕೇಳಿದ ಪ್ರಶ್ನೆಗೆ ಈ ಬಗ್ಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಒಟ್ಟು 63,32,486 ಎಕರೆ ಸರ್ಕಾರಿ ಭೂಮಿಯಲ್ಲಿ 14,72,493 ಎಕರೆ ಒತ್ತುವರಿಯಾಗಿದೆ. ಅತಿಕ್ರಮಿತ ಭೂಮಿಯಲ್ಲಿ 10,82,752 ಎಕರೆಯನ್ನು ಅಕ್ರಮ-ಸಕ್ರಮ ಯೋಜನೆಯಡಿ ಪರಿಗಣಿಸಲಾಗುತ್ತಿದೆ. ಇನ್ನುಳಿದ 3,89,741 ಎಕರೆಯಲ್ಲಿ 2,73,778 ಎಕರೆ ಒತ್ತುವರಿ ತೆರವು ಮಾಡಲಾಗಿದ್ದು, 1,15,963 ಎಕರೆ ಒತ್ತುವರಿ ತೆರವು ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.
ಮುಂದಿನ ತಿಂಗಳಿನಿಂದ ಗ್ರಾಮ ಲೆಕ್ಕಿಗರು ಭೂಮಿ ಪ್ರಮಾಣೀಕರಣಕ್ಕೆ ಆ್ಯಪ್ ಬಳಸಲಿದ್ದಾರೆ. ಅತಿಕ್ರಮಣ ಕಂಡುಬಂದಲ್ಲಿ ತಹಶೀಲ್ದಾರ್ ಗೆ ಆನ್ ಲೈನ್ ನಲ್ಲಿ ವರದಿ ಕಳುಹಿಸಲಾಗುತ್ತದೆ. ಪ್ರಕ್ರಿಯೆಯನ್ನು ನಿಖರವಾಗಿ ಮಾಡಲು ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.


