ತುಮಕೂರು: ಗೃಹ ಸಚಿವರ ತವರು ಜಿಲ್ಲೆಯ ಶಾಲೆಯ ಆವರಣದಲ್ಲಿ ಪುಂಡರ ಹಾವಳಿ ಮಿತಿಮೀರಿದ್ದು, ಸರ್ಕಾರಿ ಶಾಲಾ ಬಾಲಕಿಯರ ಶೌಚಾಲಯದ ಮೇಲೆ ಪುಂಡರು ಕಲ್ಲು ತೂರಾಟ ನಡೆಸಿದ್ದು, ಇದನ್ನು ಪ್ರಶ್ನಿಸಿದ ವಿದ್ಯಾರ್ಥಿಗೆ ಪುಂಡರ ಗುಂಪು ಹಿಗ್ಗಾಮುಗ್ಗ ಥಳಿಸಿದೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು KPS ಶಾಲೆಯ ಆವರಣಕ್ಕೆ ನುಗ್ಗಿ ಪುಂಡರು ಹಲ್ಲೆ ಮಾಡಿದ್ದಾರೆ. 10 ನೇ ತರಗತಿ ವಿದ್ಯಾರ್ಥಿ ಯಶ್ವಂತ್ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಯಶ್ವಂತ್ ಮಧ್ಯಾಹ್ನ ಮೂತ್ರ ವಿಸರ್ಜನೆಗೆ ತೆರಳಿದ್ದ, ಈ ವೇಳೆ ಬಾಲಕಿಯರ ಶೌಚಾಲಯದ ಮೇಲೆ ಪುಂಡರು ಕಲ್ಲು ಎಸೆಯುತ್ತಿದ್ದರು. ಪುಂಡರನ್ನ ಯಶ್ವಂತ್ ಪ್ರಶ್ನಿಸಿದಾಗ, ಅಟ್ಟಾಡಿಸಿಕೊಂಡು ಶಾಲೆ ಆವರಣಕ್ಕೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಹುಳಿಯರು ನಿವಾಸಿ ಮಹಬೂಬ್ ಷರಿಫ್ ಹಾಗೂ ಆತನ ಸಹಚರರಿಂದ ಪುಂಡಾಟಿಕೆ ನಡೆಸಿದ್ದು, ವಿದ್ಯಾರ್ಥಿಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ವಿದ್ಯಾರ್ಥಿ ಯಶ್ವಂತ್ ಗೆ ಬೆನ್ನು ಹಾಗೂ ತಲೆಗೆ ತೀವ್ರಪೆಟ್ಟು ಬಿದ್ದಿದೆ. ಹೀಗಾಗಿ ಆತನನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ವತಿಯಿಂದ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮಹಬೂಬ್ ಷರೀಫ್ ಹಾಗೂ ಆತನ ಸಹಚರ ಒಟ್ಟು 7 ಜನರ ವಿರುದ್ದ ದೂರು ದಾಖಲಾಗಿದ್ದು, ದೂರು ದಾಖಲಾದ ಬೆನ್ನಲ್ಲೆ ಐವರು ಪುಂಡರ ಬಂಧಿಸಲಾಗಿದೆ. ಇನ್ನಿಬ್ಬರ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4