ವರದಿ : ಮಂಜುಸ್ವಾಮಿ ಎಂ ಎನ್ ಕೊರಟಗೆರೆ
ಕೊರಟಗೆರೆ : ಶೌಚಗುಂಡಿ ತುಂಬಿಹರಿದು ಶೇಖರಣೆಯಾಗಿದ್ದ ಕೊಳಚೆಯುಕ್ತ ಮಲದ ನೀರನ್ನು 14 ವರ್ಷದ ದಲಿತ ಬಾಲಕ ಮತ್ತು ದಲಿತ ವ್ಯಕ್ತಿಯಿಂದ ಸ್ವಚ್ಚಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ(ಏಜೆನ್ಸಿ) ಮತ್ತು ಸಂಚಾರ ನಿಯಂತ್ರಕ ಸೇರಿ 4 ಜನರ ಮೇಲೆ ತಹಶೀಲ್ದಾರ್ ಮಂಜುನಾಥ್ ನೀಡಿದ ದೂರಿನ ಅನ್ವಯ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.
ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣದ ಆವರಣದಲ್ಲಿನ ಹಳೆಯ ಶೌಚಗುಂಡಿಯ ಸಮೀಪ ದುರ್ಘಟನೆ ಜರುಗಿದೆ. ಸರಕಾರಿ ಬಸ್ ನಿಲ್ದಾಣದ ಆವರಣದಲ್ಲಿ ಮೈಮೇಲೆ ಬಟ್ಟೆ ಮತ್ತು ಕೈಗಳಿಗೆ ಕೈಚೀಲ ಹಾಕದೇ ದಲಿತ ಸಮುದಾಯದ ಇಬ್ಬರು ಶೌಚಮಿಶ್ರಿತ ಕಲುಷಿತ ಕೊಳಚೆ ನೀರು ಮತ್ತು ಮಣ್ಣು ಸ್ವಚ್ಚ ಮಾಡುತ್ತಿರುವ ಬಗ್ಗೆ ಮಾಧ್ಯಮ ವರದಿ ಮಾಡಿತ್ತು.
ಶೌಚದ ಘಟನೆಯ ಹಿನ್ನಲೆ ಏನು..?
2024ರ ನ.6ನೇ ಬುಧವಾರ 12ಗಂಟೆ ವೇಳೆ ಪರಿಶಿಷ್ಟ ಜಾತಿಗೆ ಸೇರಿದ ಬಾಲಕ ಮತ್ತು ವ್ಯಕ್ತಿಯೊರ್ವ ಕೊರಟಗೆರೆಯ ಸರಕಾರಿ ಬಸ್ ನಿಲ್ದಾಣದ ಶೌಚಗುಂಡಿಯ ಸಮೀಪ ಬರೀಗೈಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಾಧ್ಯಮದವ್ರು ಪ್ರಶ್ನಿಸಿದಾಗ ಘಟನೆಯು ಬೆಳಕಿಗೆ ಬಂದಿದೆ. ನಂತರ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸುದ್ದಿಯಸತ್ಯತೆ ಬಯಲಾಗಿದೆ.
ಬಾಲಕನ ಮೇಲೆ ಮಾನಸಿಕ ಅಸ್ವಸ್ಥನ ಪಟ್ಟ:
ಕೆ ಎಸ್ ಆರ್ ಟಿ ಸಿ ನಿಗಮ ವ್ಯಾಪ್ತಿಯ ಶೌಚದ ಸ್ವಚ್ಚತಾ ಕಾರ್ಯವನ್ನು ಅಧಿಕೃತ ಟೆಂಡರ್ ಗಳ ಮೂಲಕ ಗುತ್ತಿಗೆದಾರನ ನೇಮಕ ಮಾಡಲಾಗಿದೆ. ಅದರಂತೆ ಶ್ರೀಲಕ್ಷ್ಮೀ ಎಂಟರ್ ಪ್ರೈಸಸ್ ವತಿಯಿಂದ ಸ್ವಚ್ಚತೆ ಕಾರ್ಯ ನಡೆದಿದೆ. ವ್ಯಕ್ತಿಯ ಮೂಲಕ ಸ್ವಚ್ಚತೆ ಮಾಡಲು ಅವಕಾಶವಿಲ್ಲ. ವಿಡಿಯೊದಲ್ಲಿ ಕಂಡು ಬಂದ ಬಾಲಕ ಮಾನಸಿಕ ಅಸ್ವಸ್ತ ಇರುವಂತೆ ಕಂಡು ಬರುತ್ತದೆ ಎಂದು ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಪತ್ರದ ಮೂಲಕವೇ ಮಾಧ್ಯಮಕ್ಕೆ ಸ್ಪಷ್ಟಿಕರಿಸಿದ್ದಾರೆ. ಈ ಮೂಲಕ ಬಾಲಕನಿಗೆ ಮಾಸಿಕ ಅಸ್ವಸ್ಥನ ಪಟ್ಟ ಕಟ್ಟಲಾಗಿದೆ.
ನೊಟೀಸ್‍ಗೆ ಕ್ಯಾರೇ ಎನ್ನದ ಅಧಿಕಾರಿ:
ಶೌಚಾಲಯ ಮತ್ತು ಹೊಟೇಲ್ ನ ಕಲುಷಿತ ನೀರನ್ನು ಚರಂಡಿಗೆ ಬೀಡದಂತೆ ಪಪಂಯಿಂದ ಕೆಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ 2023 ಮತ್ತು 2024ರಲ್ಲಿ 3 ಬಾರಿ ನೊಟೀಸ್ ಜಾರಿಯಾಗಿದೆ. ಹೊಟೇಲ್ ನ ಗಲೀಜು ನೀರು ಮತ್ತು ಶೌಚಾಲಯ ಫಿಟ್ ನ ಮಲದ ನೀರನ್ನು ನೇರವಾಗಿ ಚರಂಡಿಗೆ ಸಂಪರ್ಕ ನೀಡಿದ ಪರಿಣಾಮ ರಸ್ತೆಯಲ್ಲಿ ದುರ್ವಾಸನೆ ಹೆಚ್ಚಾಗಿದೆ ಎಂದು ಮನವಿ ಮಾಡಿದ್ರು ಅಧಿಕಾರಿವರ್ಗ ಕ್ಯಾರೇ ಎಂದಿಲ್ಲ.
ಶೌಚಗುಂಡಿ ತುಂಬಿ ನೀರು ದುರ್ವಾಸನೆ:
ಸರಕಾರಿ ಬಸ್ ನಿಲ್ದಾಣದ ಹಳೆಯ ಶೌಚಗುಂಡಿ ತುಂಬಿ 3 ವರ್ಷ ಕಳೆದ್ರು ಸ್ವಚ್ಚತೆ ಮಾಡಿಲ್ಲ. ಶೌಚ ಗುಂಡಿಯಿಂದ ಕೊಳಚೆಯುಕ್ತ ಮಲಿನವಾದ ನೀರು ಪ್ರತಿನಿತ್ಯವು ಹೊರಗಡೆ ಬಂದು ದುರ್ವಾಸನೆ ಬೀರುತ್ತಿದೆ. ಕೆಎಸ್ ಆರ್ ಟಿ ಸಿ ಅಧಿಕಾರಿ ವರ್ಗ ಅಥವಾ ಗುತ್ತಿಗೆದಾರನ ದಿವ್ಯ ನಿರ್ಲಕ್ಷದಿಂದ ಪ್ರಯಾಣಿಕರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
4 ಜನರ ಮೇಲೆ ಪ್ರಕರಣ ದಾಖಲು:
ಕೊರಟಗೆರೆಯ ಸಾರಿಗೆ ಸಂಚಾರ ನಿಯಂತ್ರಕ, ಮಂಡ್ಯದ ಗುತ್ತಿಗೆದಾರ ಶ್ರೀನಿಮಿಷಾಂಬ ಎಂಟರ್ ಪ್ರೈಸಸ್, ತುಮಕೂರಿನ ನಿತೀಶ್ ಮತ್ತು ಕುಮಾರ್ ಎಂಬಾತನ ಮೇಲೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ತಹಶೀಲ್ದಾರ್ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಂದಾಯ, ಪೊಲೀಸ್, ಪಪಂ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಜಂಟಿಯಾಗಿ ಶೌಚಗುಂಡಿಯ ಸ್ಥಳ ಪರಿಶೀಲನೆ ನಡೆದಿದೆ. ಬಸ್ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಿಂದ ಇನ್ನಷ್ಟು ಮಾಹಿತಿ ಪಡೆಯುತ್ತೇವೆ. ಹಳೆಯ ಶೌಚಗುಂಡಿ ತುಂಬಿ ದುರ್ವಾಸನೆ ಬೀರುತ್ತಿದೆ. ಕೆಎಸ್‍ಆರ್‍ಟಿಸಿ ಸಿಬ್ಬಂದಿ ಮತ್ತು ಏಜೆಸ್ಸಿಯ ವಿರುದ್ದ ದೂರು ದಾಖಲಿಸಲು ಸೂಚಿಸಲಾಗಿದೆ.
–ಕೃಷ್ಣಪ್ಪ, ಜಂಟಿ ನಿರ್ದೇಶಕ. ಸಮಾಜ ಕಲ್ಯಾಣ ಇಲಾಖೆ. ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q