ಅಮೆರಿಕದ ಇಯೊವಾ ರಾಜ್ಯದ ಪುಟ್ಟ ಪಟ್ಟಣವಾದ ಗ್ರೀನ್ ಫೀಲ್ಡ್ ನಲ್ಲಿ ಬೀಸಿದ ಭೀಕರ ಬಿರುಗಾಳಿಗೆ ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹಲವಾರು ಮನೆಗಳು ಕುಸಿದುಬಿದ್ದಿದ್ದು, ಕಾರು ಮತ್ತಿತರ ವಾಹನಗಳು ಚೆಲ್ಲಾಪಿಲ್ಲಿಯಾಗಿ ಚದುರಿಬಿದ್ದಿವೆ.
ಸುಮಾರು 2 ಸಾವಿರ ಜನಸಂಖ್ಯೆಯ ಗ್ರೀನ್ ಫೀಲ್ಡ್ ಪಟ್ಟಣವನ್ನು ವ್ಯಾಪಕ ವಿನಾಶವನ್ನುಂಟು ಮಾಡಿದ ಬಿರುಗಾಳಿ ಆನಂತರ ಪೂರ್ವಾಭಿಮುಖವಾಗಿ ಚಲಿಸಿದ್ದು, ಇಲಿನಾಯ್ಸ್ ಹಾಗೂ ವಿಸ್ಕೊನ್‌ಸಿನ್ ರಾಜ್ಯಗಳ ಹಲವು ಭಾಗಗಳಲ್ಲಿ ಹಾವಳಿಯೆಬ್ಪಿಸಿದೆ. ಈ ಎರಡೂ ರಾಜ್ಯಗಳ ಹಲವೆಡೆ ವಿದ್ಯುತ್‌ಕಂಬಗಳು ಉರುಳಿಬಿದ್ದಿದ್ದು, ಸಾವಿರಾರು ಜನರು ವಿದ್ಯುತ್ ಇಲ್ಲದೆಯೇ ದಿನಕಳೆಯಬೇಕಾಯಿತು.
ಗ್ರೀನ್‌ಫೀಲ್ಡ್ ನಲ್ಲಿ ಬಿರುಗಾಳಿಯ ಹೊಡೆತಕ್ಕೆ ಆಸ್ಪತ್ರೆಯೊಂದು ಧರಾಶಾಯಿಯಾಗಿದ್ದು 12 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆನಂತರ ಬೇರೊಂದು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆಯೆಂದು ಇಯೊವಾ ರಾಜ್ಯದ ಗಸ್ತುದಳದ ಸಾರ್ಜಂಟ್ ಅಲೆಕ್ಸ್ ಡಿಂಕ್ಲಾ ತಿಳಿಸಿದ್ದಾರೆ.
ಬಿರುಗಾಳಿಯ ಹಾವಳಿಗೆ ಸಾವುಗಳು ಸಂಭವಿಸಿರುವುದು ದೃಢಪಟ್ಟಿದೆಯೆಂದು ಅವರು ಹೇಳಿದ್ದಾರೆ. ಬಿರುಗಾಳಿ ಹಾವಳಿಯ ನಂತರ ನಾಪತ್ತೆಯಾದವರಿದ್ದರೆ ಆ ಬಗ್ಗೆ ವರದಿಯೂ ನೀಡುವಂತೆಯೂ ಅವರು ಸ್ಥಳೀಯರಿಗೆ ಮನವಿ ಮಾಡಿದ್ದಾರೆ.
ಅಮೆರಿಕದ ಹಲವಾರು ರಾಜ್ಯಗಳಲ್ಲಿ ಬಿರುಗಾಳಿ, ಮಳೆಯಾಗಿರುವ ಬಗ್ಗೆ ವರದಿಯಾಗಿರುವುದಾಗಿ ರಾಷ್ಟ್ರೀಯ ಹವಾಮಾನ ಸೇವಾ ಇಲಾಖೆ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296