ತುಮಕೂರು: ಅಂಗವಿಕಲ ಮತ್ತು ಬುದ್ಧಿಮಾಂದ್ಯ ಮಕ್ಕಳನ್ನು ಮನೆಯಿಂದ ಹೊರಗೆ ಬರದಂತೆ ಕಟ್ಟಿ ಹಾಕುವುದು ಅಥವಾ ಬಂಧಿಸಿಡುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಇಂತಹ ಕೃತ್ಯವೆಸಗುವವರು ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ನೂರುನ್ನೀಸಾ ಅವರು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಂಗಳವಾರ ನಡೆದ ‘ವಿಕಲಚೇತನ ಮಕ್ಕಳು ಹಾಗೂ ಆರೈಕೆದಾರರೊಂದಿಗಿನ ಸಂವಾದ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಆರೈಕೆ ಕಷ್ಟವೆನಿಸಿದರೆ ಅವರನ್ನು ಡೇ ಕೇರ್ ಸೆಂಟರ್ ಗಳು ಅಥವಾ ವಿಶೇಷ ವಸತಿ ಶಾಲೆಗಳಿಗೆ ಸೇರಿಸಬೇಕು. ಆದರೆ ಯಾವುದೇ ಕಾರಣಕ್ಕೂ ಅವರನ್ನು ಮನೆಯಲ್ಲಿ ಬಂಧಿಸಬಾರದು ಎಂದು ಸಲಹೆ ನೀಡಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಅಂಗವಿಕಲರಿಗೆ ಸಿಗುವ ಸೌಲಭ್ಯಗಳ ವಿತರಣೆಯಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕು ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.
ಮೊಬಿಲಿಟಿ ಇಂಡಿಯಾ ಸಂಸ್ಥೆಯ ಅಲ್ಬಿನಾ ಶಂಕರ್ ಅವರು ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ, ಬಿ.ಎಸ್.ಚಿದಾನಂದಮೂರ್ತಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


