ತುರುವೇಕೆರೆ: ತಾಲೂಕಿನ ದಬ್ಬೆಘಟ್ಟ ರಸ್ತೆಯ ಸಾರಿಗೆ ಬಸ್ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ನೂರಾರು ವಿದ್ಯಾರ್ಥಿಗಳು ಕೆಎಸ್ ಆರ್ ಟಿಸಿ ಬಸ್ಸುಗಳನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ಶಾಲಾ-ಕಾಲೇಜುಗಳಿಗೆ ತೆರಳಲು ಸಕಾಲಕ್ಕೆ ಬಸ್ ಸೌಲಭ್ಯ ಇಲ್ಲದಿರುವುದನ್ನು ಖಂಡಿಸಿ, ಜೆಡಿಎಸ್ ವಿದ್ಯಾರ್ಥಿ ಘಟಕದ ತಾಲೂಕು ಅಧ್ಯಕ್ಷ ಹೃತ್ವಿಕ್ ಗೌಡ ಅವರ ನೇತೃತ್ವದಲ್ಲಿ ಈ ಹೋರಾಟ ನಡೆಯಿತು.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳ ಕಿಡಿ:
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹೃತ್ವಿಕ್ ಗೌಡ, “ಕಳೆದ ಒಂದು ವರ್ಷದಿಂದ ವಿದ್ಯಾರ್ಥಿಗಳು ಬಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಳಿಗ್ಗೆ ಕಾಲೇಜಿಗೆ ಬರಲು ಮತ್ತು ಸಂಜೆ ಗ್ರಾಮಗಳಿಗೆ ಮರಳಲು ಸರಿಯಾದ ಸಮಯಕ್ಕೆ ಬಸ್ಸುಗಳಿಲ್ಲ. ಈ ಬಗ್ಗೆ ಡಿಪೋ ಮ್ಯಾನೇಜರ್‌ಗೆ ಹಲವಾರು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಮನವಿ ನೀಡಿದ ಎರಡು ದಿನ ಮಾತ್ರ ಸರಿಯಾಗಿ ಬಸ್ ಬಿಟ್ಟು, ನಂತರ ಮತ್ತೆ ಹಳೆ ಚಾಳಿ ಮುಂದುವರಿಸುತ್ತಾರೆ. ಅಧಿಕಾರಿಗಳ ಈ ಉದಾಸೀನತೆಯಿಂದ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ,” ಎಂದು ಆಕ್ರೋಶ ಹೊರಹಾಕಿದರು.
ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಮತ್ತು ಶಾಸಕರು:
ಪ್ರತಿಭಟನಾ ಸ್ಥಳಕ್ಕೆ ತಾಲೂಕು ದಂಡಾಧಿಕಾರಿ ಕುಂಹಿ ಅಹಮದ್ ಭೇಟಿ ನೀಡಿ ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿದರು. ನಂತರ ಬಂದ ಡಿಪೋ ಮ್ಯಾನೇಜರ್, ಸಿಬ್ಬಂದಿ ಮತ್ತು ಬಸ್ಸುಗಳ ಕೊರತೆಯಿಂದ ಈ ಸಮಸ್ಯೆಯಾಗಿದೆ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದಾಗ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳ ನಡುವೆ ತೀವ್ರ ವಾಗ್ವಾದ ನಡೆಯಿತು.
“ನಿಮ್ಮಿಂದ ಬಸ್ ಬಿಡಲು ಸಾಧ್ಯವಾಗದಿದ್ದರೆ ಹೇಳಿ, ನಾವು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ,” ಎಂದು ವಿದ್ಯಾರ್ಥಿಗಳು ಸವಾಲು ಹಾಕಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ತಾಲೂಕಿನ ಶಾಸಕರು, ತಕ್ಷಣವೇ ಸಕಾಲಕ್ಕೆ ಬಸ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಇದೇ ವೇಳೆ ಸಿಎಸ್ ಪುರ ಜೆಡಿಎಸ್ ಯುವ ಮುಖಂಡರಾದ ಪಾಂಡುಗೌಡ, ಬೆಂಗಳೂರು ಯುವ ಮುಖಂಡರಾದ ಸುಗಮ್ ಗೌಡ, ಯುವ ಮುಖಂಡರುಗಳಾದ, ರಾಮ್ ಕುಮಾರ್, ಪ್ರಸಾದ್ ಗೌಡ, ಸುಮಂತ್, ಪವನ್, ಪೃಥ್ವಿ, ಕುಶಾಲ್, ಹೇಮಂತ್, ಹರ್ಷ, ಮನು, ಧನುಷ್, ಆನಂದ್, ಯದು ಗುಬ್ಬಿ, ಕುಮಾರ್, ಭರತ್ ಗೌಡ, ದರ್ಶನ್, ಹಾಗೂ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಮಂಜುನಾಥ್ ಕೆ.ಎ, ತುರುವೇಕೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


