ವಿದ್ಯಾರ್ಥಿನಿಯ ನಗ್ನ ವಿಡಿಯೋ ಚಿತ್ರೀಕರಣ ಪ್ರಕರಣವನ್ನು ತನಿಖೆಗಾಗಿ ಸಿಬಿಐಗೆ ವರ್ಗಾಯಿಸಿ ಎಂದು ರಾಜ್ಯದ ಮಾಜಿ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ್ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ. ಉಡುಪಿಯ ನೇತ್ರಜ್ಯೋತಿ ಕಾಲೇಜಿನಲ್ಲಿ ನಡೆದ ಹಿಂದೂ ವಿದ್ಯಾರ್ಥಿನಿಯ ನಗ್ನ ವಿಡಿಯೋ ಚಿತ್ರೀಕರಣವನ್ನು ಖಂಡಿಸಿ ಮತ್ತು ಇದರ ಸಮಗ್ರ ತನಿಖೆಗೆ ಆಗ್ರಹಿಸಿ ನಗರದಲ್ಲಿ ಇಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ಘಟನೆ ನಡೆದ ಕುರಿತು ಆರೋಪಿತ ವಿದ್ಯಾರ್ಥಿನಿಯರೇ ತನ್ನೊಪ್ಪಿಗೆ ಪತ್ರ ನೀಡಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು. ಘಟನೆ ನಡೆದುದು ನಿಜ. ಇದನ್ನು ಹಗುರವಾಗಿ ತೆಗೆದುಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದರು. ಇದನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕೆ ಓಲೈಕೆ, ಜಿಹಾದಿ ರಾಜಕಾರಣ ಕಾರಣ ಎಂದು ಟೀಕಿಸಿದರು.
ಕಂಡಿಷನ್ ಇಲ್ಲದೆ ಮತ ಹಾಕಿಸಿಕೊಂಡಿದ್ದೀರಿ. ಎಲ್ಲರಿಗೂ ಕಂಡಿಷನ್ ಇಲ್ಲದೆ ಗ್ಯಾರಂಟಿಗಳನ್ನು ಕೊಡಿ ಎಂದ ಅವರು, ಕೇಂದ್ರದ ಅನುದಾನ, ರಾಜ್ಯದ ಕರ ಸಂಗ್ರಹಗಳನ್ನು ಬಳಸಿಕೊಳ್ಳಿ. ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ಇವರಿಗೆ ಲೆಕ್ಕಾಚಾರದ ಕೊರತೆ ಇದೆ. ಅಭಿವೃದ್ಧಿ ಕಡೆ ಗಮನದ ಕೊರತೆ ಇದೆ. ಚಿಂತನೆಯ ಕೊರತೆ, ಅಸಹಾಯಕತೆ ಕಾಡುತ್ತಿದೆ. ಉತ್ತಮ ಆಡಳಿತ ಕೊಡಲಾಗದ ಈ ಸರಕಾರದಿಂದ ಅಭಿವೃದ್ಧಿ ಬಯಸಲಾಗದು ಎಂದು ಟೀಕಿಸಿದರು.
ರೈತ ವಿರೋಧಿ, ಮಹಿಳಾ ವಿರೋಧಿ, ದಲಿತ ವಿರೋಧಿ ರಾಜ್ಯ ಸರಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಅಭಿವೃದ್ಧಿಯ ವಿಚಾರದಲ್ಲಿ ಸೋತಿದೆ ಎಂದು ಅವರು ದೂರಿದರು. ಕಾಂಗ್ರೆಸ್ ಸರಕಾರವನ್ನು ಕಿತ್ತೆಸೆಯುವ ಕೆಲಸ ಆಗಬೇಕೆಂದು ಅವರು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ಮಾತನಾಡಿ, ಈ ಘಟನೆಯ ಸಮಗ್ರ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. 3 ವಿದ್ಯಾರ್ಥಿನಿಯರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಅವರು ಮಾತನಾಡಿ, ಇದೊಂದು ಉದ್ದೇಶಪೂರ್ವಕ ಕೃತ್ಯ. ಅಪರಾಧ ಮಾಡಿದ ಹೆಣ್ಮಕ್ಕಳನ್ನು ರಕ್ಷಿಸುವ ಮತ್ತು ಸಂತ್ರಸ್ತ ವಿದ್ಯಾರ್ಥಿನಿಯ ಮೇಲೆ ಒತ್ತಡ ಹೇರುವ ಕೆಲಸ ನಡೆದಿದೆ. ಘಟನೆಯನ್ನು ಬೆಳಕಿಗೆ ತಂದವರ ಮೇಲೂ ಒತ್ತಡ ಹಾಕುತ್ತಿದ್ದಾರೆ. ಸಾಕ್ಷ್ಯ ನಾಶದ ಕೆಲಸವೂ ನಡೆದಿದೆ ಎಂದು ಟೀಕಿಸಿದರು.
ಬೆಂಗಳೂರು ಉತ್ತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಆಶಾರಾವ್, ಬೆಂಗಳೂರು ಕೇಂದ್ರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರೇಖಾ ಗೋವಿಂದ, ಬೆಂಗಳೂರು ದಕ್ಷಿಣ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮೀ ಆನಂದ್ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಇಡೀ ಸಮಾಜ ತಲೆತಗ್ಗಿಸುವ ಅತ್ಯಂತ ಖೇದಕರ ಘಟನೆ ಇದಾಗಿದೆ. ಶೌಚಾಲಯದಲ್ಲಿ, ಬಾತ್‌ರೂಂನಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಮಾಡಿ ಅದನ್ನು ತಮ್ಮ ತಮ್ಮ ನೆಟ್‌ವಕ್‌ರ್ಗಳಿಗೆ ಕಳುಹಿಸುವ ದೊಡ್ಡ ನಾಚಿಕೆಗೇಡಿನ ಸಂಗತಿ ಬಗ್ಗೆ ವಿಳಂಬವಾಗಿ ಎಫ್‌ಐಆರ್ ಮಾಡಿದ್ದು, ಇದು ಪ್ರಕರಣವನ್ನು ಮುಚ್ಚಿಹಾಕುವ ತಂತ್ರದಂತಿದೆ ಎಂದು ಆಕ್ಷೇಪ ಸೂಚಿಸಲಾಯಿತು. ಹಣೆಗೆ ಕಪ್ಪು ಪಟ್ಟಿ ಧರಿಸಿ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ವಿದ್ಯಾರ್ಥಿನಿಯ ಖಾಸಗಿ ವಿಡಿಯೋ ಮಾಡಿದರೂ ಸರಕಾರದ ಮೌನ ಸರಿಯೇ ಎಂದು ಪ್ರಶ್ನಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


