ತುಮಕೂರು: ಕಠಿಣ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಯಶಸ್ಸನ್ನ ಸಾಧಿಸಲು ಸಾಧ್ಯವಾಗುತ್ತದೆ. ಪ್ರಾಮಾಣಿಕವಾಗಿ ನಿರಂತರ ಸಾಧನೆಯಲ್ಲಿ ತೊಡಗಿಸಿಕೊಂಡರೆ ಸಫಲತೆ ಕಾಣಬಹುದು ಎಂದು ಇಸ್ರೋದ ಮಾಜಿ ಪ್ರಾಜೆಕ್ಟ್ ಇಂಜಿನಿಯರ್ ಹಾಗೂ ವಿಜ್ಞಾನಿ ಕೆ.ಟಿ. ಸುಂದರಮೂರ್ತಿ ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ತುಮಕೂರಿನ ಗೊಲ್ಲಹಳ್ಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ 18ನೇ ಬ್ಯಾಚ್ ನ ಹಳೆ ವಿದ್ಯಾರ್ಥಿಗಳು ಆಯೋಜಿಸಿದ್ದ ಹಳೆ ವಿದ್ಯಾರ್ಥಿಸಂಘದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ನವೋದಯ ವಿದ್ಯಾಲಯದ ಕಾರ್ಯ ಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳ ಸಾಧನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಜವಾಹರ ನವೋದಯ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಹನುಮಂತ ರೆಡ್ಡಿ ಅವರು ಮಾತನಾಡಿ, ಶಾಲೆಯ ಸುಂದರ ಪರಿಸರವನ್ನು ಅಂದಗೆಡದಂತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯ ಅರಿವು ಮೂಡಿಸಿದರು.
ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಕಲಾರವರು ಪ್ರಾಸ್ತಾವಿಕವಾಗಿ ಮಾತನಾಡಿ, ಹಳೆ ವಿದ್ಯಾರ್ಥಿಗಳ 18 ನೇ ಬ್ಯಾಚಿನ ವಿದ್ಯಾರ್ಥಿಗಳು 2024– 25 ನೇ ಸಾಲಿನಲ್ಲಿ ಹಮ್ಮಿಕೊಂಡ ವೃತ್ತಿ ಮಾರ್ಗದರ್ಶನ ಶಿಬಿರ, ವೈದ್ಯಕೀಯ ಶಿಬಿರ ಮೊದಲಾದ ಸೇವಾ ಕಾರ್ಯಕ್ರಮಗಳ ಕುರಿತಂತೆ ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿನಿ ಪ್ರಸ್ತುತ ವಿಶಾಖಪಟ್ಟಣಂದಲ್ಲಿ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಕಲ್ಪಶ್ರೀ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರವೀಣ್ ಕುಮಾರ್, ಶಾಲೆಯಲ್ಲಿ ಸೇವೆ ಸಲ್ಲಿಸಿದ ಉಪಪ್ರಾಂಶಪಾಲರಾದ ಜಯಂತಿ ಗೋಪಾಲನ್, ಆದಿಲಕ್ಷ್ಮಿ, ಶ್ರೀ ಜನಾರ್ದನ್ ಸೇರಿದಂತೆ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಎಲ್ಲಾ ಶಿಕ್ಷಕರನ್ನು ಮತ್ತು ಸಿಬ್ಬಂದಿ ವರ್ಗವನ್ನು ಗುರುವಂದನೆಯ ಅಂಗವಾಗಿ ಆತ್ಮೀಯವಾಗಿ ಸನ್ಮಾನಿಸಿದ್ದು ಕಾರ್ಯಕ್ರಮಕ್ಕೆ ಮೆರಗು ತಂದಿತ್ತು. 500 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳ ಆಗಮಿಸಿದ್ದರು. ಮಧ್ಯಾಹ್ನದ ಭೋಜನದ ನಂತರ ಹಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಮನೋರಂಜನೆ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಜರುಗಿದವು. ಹಳೆ ವಿದ್ಯಾರ್ಥಿಗಳು ಆಯೋಜಿಸಿದ ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಾದವರಿಗೆ ಟ್ರೋಪಿಗಳನ್ನು ವಿತರಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx