ತುಮಕೂರು: ಕನ್ನಡ ಸಾಹಿತ್ಯದಲ್ಲಿ ಬಸವಾದಿ ಶರಣ ಶರಣೆಯರು ಸ್ವತಂತ್ರ ಧೀರರು ಅಲ್ಲದೆ ಸ್ವತಂತ್ರ ವಿಚಾರವಾದಿಗಳಾಗಿದ್ದರು” ಎಂದು ಆಧುನಿಕ ವಚನಕಾರರಾದ ರುದ್ರಮೂರ್ತಿ ಎಲೆರಾಂಪುರರವರು ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಬಸವೇಶ್ವರ ವಿದ್ಯಾರ್ಥಿನಿಲಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯಂದು ತುಮಕೂರು ಜಿಲ್ಲಾ ಮತ್ತು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಸಹಕಾರದಲ್ಲಿ ಲಿಂ.ಸಿದ್ಧವೀರಮ್ಮ ನಂಜಣ್ಣ ಬಸವರಾಜಪ್ಪ ದತ್ತಿಯಲ್ಲಿ “ಶರಣರು ಸ್ವತಂತ್ರ ಧೀರರು” ಎಂಬ ವಿಷಯವಾಗಿ ಮಾತನಾಡುತ್ತಿದ್ದರು.
ಶರಣರು ಎಂದಿಗೂ ಪರರ ಆಶ್ರಯದಲ್ಲಿ ಬೇಡಿ ಬದುಕಿದವರಲ್ಲ. ರಾಜರನ್ನ ಹೊಗಳಿ ಸಾಹಿತ್ಯ ರಚಿಸಲಿಲ್ಲ, ಸ್ವತಂತ್ರವಾಗಿ ಕಾಯಕ ನಂಬಿ ಬದುಕಿದ ವಿಚಾರವಂತರು ಎಂದರು.
ಜೇಡರದಾಸಿಮಯ್ಯ ಅಲ್ಲದೆ ಅನೇಕ ಶರಣ ಶರಣೆಯರ ಹಲವು ವಚನಗಳ ದೃಷ್ಟಾಂತ ನೀಡಿ ವಿವರಿಸಿ, ತಮ್ಮ ಸ್ವರಚಿತ ವಚನಗಳನ್ನು ಹಾಡಿ ರಂಜಿಸಿದರು.
ದತ್ತಿದಾನಿಗಳಾದ ಜಿ.ಎನ್.ಬಸವರಾಜಪ್ಪನವರು ಉದ್ಘಾಟಿಸಿ ಮಾತನಾಡುತ್ತಾ, ತಾವು ಬಾಲ್ಯದಲ್ಲಿ ಶಿಕ್ಷಣದಿಂದ ವಂಚಿತರಾದಾಗ ತಮ್ಮ ತಂದೆ ತಾಯಿಯವರ ಪೂರ್ಣ ಜವಾಬ್ದಾರಿಯಿಂದ ವಿದ್ಯಾವಂತರಾಗಿ ಇಂದು ಈ ಮಟ್ಟದಲ್ಲಿ ಬೆಳೆಯಲು ವಿದ್ಯೆಯೇ ಸರ್ವಸ್ವ ಎಂದರು. ಸಿದ್ಧಾರ್ಥ ಸಂಸ್ಥೆಯ ಡಿ.ಎಂ.ಗಂಗಾಧರಯ್ಯನವರ ಸಲಹೆ ಸಹಕಾರ ಸ್ಮರಿಸಿದರು. ಯುವ ಜನಾಂಗಕ್ಕೆ ಆದರ್ಶ ಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಎಂ.ಜಿ.ಸಿದ್ಧರಾಮಯ್ಯನವರು ಮಾತನಾಡಿ, ಇತ್ತೀಚೆಗೆ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜುಗಳಲ್ಲಿ ವಿ.ವಿ.ಗಳಲ್ಲಿ, ಕಾಲೇಜುಗಳಲ್ಲಿ ಶರಣರ ವಿಚಾರಧಾರೆಗಳನ್ನು ಸಂಘ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕವಾಗಿ ಯುವಜನತೆಗೆ ಅರಿವು ಮೂಡಿಸಲು ಸಹಕಾರ ನೀಡುವುದರ ಬಗ್ಗೆ ತಿಳಿಸಿದರು. ಸರ್ಕಾರದ ನೂತನ ಆದೇಶವನ್ನು ಸಭೆಗೆ ತಿಳಿಸಿದರು.
ನಿಲಯದ ಕಾರ್ಯದರ್ಶಿಗಳಾದ ಜಿ.ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಬಿ.ರಾಜಶೇಖರಯ್ಯ ಪರಿಷತ್ತಿನ ಉದ್ದೇಶ ತಿಳಿಸಿದರು. ಬಸವೇಶ್ವರ ವಿದ್ಯಾರ್ಥಿನಿಲಯದ ವಿದ್ಯಾರ್ಥಿ ಶಿವರಾಜ ಪಾಟೀಲ್ ಬಸವಣ್ಣನವರ ವಚನಗಳ ಬಗ್ಗೆ ಅನಿಸಿಕೆ ನೀಡಿದರು.
ಭವಾನಮ್ಮ ಗುರುಮಲ್ಲಪ್ಪ, ಹಂ.ಸಿ.ಕುಮಾರಸ್ವಾಮಿ, ಮಿಮಿಕ್ರಿ ಈಶ್ವರಯ್ಯ, ವಚನ ಗಾಯನ ಮಾಡಿದರು. ವಿಶ್ವನಾಥಸ್ವಾಮಿ ವಂದಿಸಿದರು. ಸಿಹಿ ವಿತರಣೆ ಆಯ್ತು. ರಾಜಶೇಖರಯ್ಯ ಈಚನೂರು ನಿರೂಪಿಸಿದರು. ವಚನ ಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q