ರಾಜಧಾನಿಯಲ್ಲಿ ಉಗ್ರ ಕೃತ್ಯ ಎಸಗಲು ಸಂಚು ರೂಪಿಸಿದ ಆರೋಪದಡಿ ಬಂಧಿತರಾಗಿರುವ ಐವರು ಶಂಕಿತ ಭಯೋತ್ಪಾದಕರ ಪೊಲೀಸ್ ಕಸ್ಟಡಿ ಇಂದು ಅಂತ್ಯ ಹಿನ್ನೆಲೆ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಶಂಕಿತರನ್ನ ಹಾಜರುಪಡಿಸಲಾಗಿತ್ತು.
ಬಳಿಕ ಎನ್‌ಐಎ ವಿಶೇಷ ನ್ಯಾಯಾಲಯ ಆರೋಪಿಗಳನ್ನು ಮತ್ತೆ 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿತು. ನಗರದಲ್ಲಿ ವಿಧ್ವಂಸಕ ಕೃತ್ಯವೆಸಲು ಸಂಚು ರೂಪಿಸಿದ್ದು, ಈ ಸಂಬಂಧ ಶಂಕಿತರಿಂದ ಗ್ರೆನೇಡ್ ಸೇರಿದಂತೆ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಉಗ್ರ ಕೃತ್ಯವೆಸಗಲು ತಯಾರಿ ನಡೆಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಶಂಕಿತರನ್ನ ತೀವ್ರ ವಿಚಾರಣೆಗೊಳಪಡಿಸಬೇಕಿದೆ. ಅಲ್ಲದೇ ಶಂಕಿತರ ಹಿಂದೆ ಹಲವು ವ್ಯಕ್ತಿಗಳ ಕೈವಾಡವಿದೆ. ಹೀಗಾಗಿ ಆರೋಪಿತರನ್ನು ಹೆಚ್ಚಿನ ವಿಚಾರಣೆಗೊಳಪಡಿಸಬೇಕಿದೆ. ಹೀಗಾಗಿ 15 ದಿನಗಳ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಸಿಸಿಬಿ ಪರ ವಕೀಲರು ಮನವಿ ಮಾಡಿದರು.
ವಾದ- ಪ್ರತಿವಾದ ಆಲಿಸಿ ಅಂತಿಮವಾಗಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲು ನ್ಯಾಯಾಲಯ ಸಮ್ಮತಿಸಿತು. ಸದ್ಯ ಮಡಿವಾಳದ ಎಫ್‌ಎಸ್‌ಎಲ್ ನ ವಿಚಾರಣಾ ಕೊಠಡಿಯಲ್ಲಿ ಸಿಸಿಬಿ ಶಂಕಿತರನ್ನು ವಿಚಾರಣೆಗೊಳಪಡಿಸಿದೆ. ಪ್ರಕರಣದ A1 ಆರೋಪಿ ಉಗ್ರ ಟಿ. ನಜೀರ್‌ನನ್ನು ಕಸ್ಟಡಿಗೆ ಪಡೆಯಲು ಸಿಸಿಬಿ ಸಿದ್ಧತೆ ನಡೆಸಿದ್ದು, ಜೈಲಿನಲ್ಲಿರುವ ಉಗ್ರ ನಜಿರ್‌ನ ವಿಚಾರಣೆ ನಡೆಸಿದರೆ ಮತ್ತಷ್ಟು ಅಂಶಗಳು ಹೊರಬೀಳಲಿವೆ. ಪ್ರಕರಣ ಎರಡನೇ ಆರೋಪಿ ಜುನೈದ್ ಗೆ ಉಗ್ರ ಚಟುವಟಿಕೆ ನಡೆಸುವಂತೆ ಬ್ರೈನ್ ವಾಶ್ ಮಾಡಿದ್ದ ನಜಿರ್ 2008ರ ಸರಣಿ ಬಾಂಬ್ ಸ್ಫೋಟದ ಆರೋಪಿಯಾಗಿದ್ದಾನೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


