ಬಳ್ಳಾರಿ: ಬಳ್ಳಾರಿ ನಗರದ ಗ್ಲಾಸ್ ಬಜಾರ್ ಪ್ರದೇಶದಲ್ಲಿ ವಾಸವಾಗಿದ್ದ ಬಟ್ಟೆ ವ್ಯಾಪಾರಿ ದಂಪತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಬ್ರೂಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಳ್ಳಾರಿ ನಗರದ ಗ್ಲಾಸ್ ಬಜಾರ್ ಪ್ರದೇಶದಲ್ಲಿ ವಾಸವಾಗಿದ್ದ ಶಂಕರ್ ರಾಮ್ (40) ಮತ್ತು ಶಾಂತಾದೇವಿ (34) ಮೃತಪಟ್ಟವರು ಎಂದು ಗುರುತಿಸಲಾಗಿದೆ.
15 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸವಾಗಿದ್ದ ದಂಪತಿ ಅನ್ನೋನ್ಯವಾಗಿಯೇ ಇದ್ದರು. ಈ ನಡುವೆ ದಂಪತಿ ಮಧ್ಯೆ ಏನಾಯಿತೋ, ಏನೋ ಗೊತ್ತಿಲ್ಲ. ಪತ್ನಿಯನ್ನು ಕೊಂದು ಶಂಕರ್ ರಾಮ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಇಂದು ಬೆಳಗ್ಗೆ ಶಂಕರ್ ರಾಮ್ ಸಂಬಂಧಿ ಇವರ ಮನೆ ಬಳಿ ಬಂದಾಗ ಬಾಗಿಲು ತೆಗೆದಿಲ್ಲ. ಕಿಟಕಿ ಮೂಲಕ ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಶಂಕರ್ ರಾಮ್ ಕಂಡುಬಂದಿದ್ದು, ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಬ್ರೂಸ್‌ಪೇಟೆ ಠಾಣೆ ಪೊಲೀಸರು ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಶಂಕರ್ ರಾಮ್ ಅವರ ಪತ್ನಿ ಸಹ ಮೃತಪಟ್ಟಿರುವುದು ಕಂಡುಬಂದಿದೆ.
ಸ್ಟೀಲ್ ಫ್ಲಾಸ್‌ನಿಂದ ಪತ್ನಿಯ ತಲೆಗೆ ಹೊಡೆದು ಕೊಲೆ ಮಾಡಿ ನಂತರ ಶಂಕರ್ ರಾಮ್ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4