ವಿಜಯನಗರ ಸಂಚಾರ ಠಾಣೆಯ ಹೆಡ್ ಕಾನ್ ಸ್ಟೆಬಲ್ ನವೀನ್‌ಕುಮಾರ್ (35) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಈ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಹಾಸನದ ನವೀನ್ ಕುಮಾರ್, ಹಲವು ವರ್ಷಗಳಿಂದ ವಿಜಯನಗರ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅತ್ತಿಗುಪ್ಪೆಯಲ್ಲಿ ವಾಸವಿದ್ದರು.
ಭಾನುವಾರ ಬೆಳಿಗ್ಗೆ ಅವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ’ ಎಂದು ಪೊಲೀಸರು ಹೇಳಿದರು. ‘ಶನಿವಾರ ರಾತ್ರಿ ಕೆಲಸ ಮುಗಿಸಿ ನವೀನ್ ಮನೆಗೆ ಹೋಗಿದ್ದರು. ಶನಿವಾರ (ಆಗಸ್ಟ್ 5) ಬೆಳಿಗ್ಗೆ ಸಹೋದರ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ಸಹೋದರ, ಮನೆ ಬಳಿ ಹೋಗಿ ನೋಡುವಂತೆ ಸಂಬಂಧಿಕರಿಗೆ ತಿಳಿಸಿದ್ದರು. ಸಂಬಂಧಿಕರು, ಮನೆಗೆ ಹೋಗಿ ನೋಡಿದಾಗಲೇ ಮೃತದೇಹ ಕಂಡಿತ್ತು’ ಎಂದು ತಿಳಿಸಿದರು.
‘ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಯಿತು. ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ’ ಎಂದರು.
ಮದುವೆ ನಿಶ್ಚಯ: ‘ನವೀನ್ ಅವರಿಗೆ ಮದುವೆ ನಿಶ್ಚಯವಾಗಿತ್ತು. ಆಗಸ್ಟ್ ಕೊನೆಯ ವಾರದಲ್ಲಿ ಮದುವೆ ನಡೆಯಬೇಕಿತ್ತು. ಇದರ ನಡುವೆಯೇ ಅವರು ಮೃತಪಟ್ಟಿದ್ದು, ಸಾವಿನಲ್ಲಿ ಅನುಮಾನಗಳಿವೆ’ ಎಂದು ಪೊಲೀಸರು ಹೇಳಿದರು.
‘ಮದ್ಯದಲ್ಲಿ ವಿಷ ಬೆರೆಸಿ ಕುಡಿದು ನವೀನ್ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಕೌಟುಂಬಿಕ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ಇದೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


