ತುಮಕೂರು: ಕೆ.ಎನ್.ರಾಜಣ್ಣ ಸಚಿವ ಸಂಪುಟದಿಂದ ವಜಾಗೊಂಡ ಹಿನ್ನೆಲೆ ಇದೀಗ ಮಹತ್ವದ ಬೆಳವಣಿಗೆಯಾಗಿದ್ದು, ರಾಜಣ್ಣನ ಬೆನ್ನಿಗೆ ವಿವಿಧ ಮಠಗಳ ಸ್ವಾಮೀಜಿಗಳು ನಿಂತು ಬೆಂಬಲ ಸೂಚಿಸಿದ್ದಾರೆ.
ತುಮಕೂರಿನ ಕ್ಯಾತ್ಸಂದ್ರ ರಾಜಣ್ಣನ ನಿವಾಸಕ್ಕೆ ಬಂದ ಚಿತ್ರದುರ್ಗದ ಶ್ರೀ ಜಗದ್ಗುರು ಅಖಿಲ ಕುಂಚಿಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳು, ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು, ಹೊಸದುರ್ಗದ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಚಿತ್ರದುರ್ಗದ ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು, ದಾವಣಗೆರೆಯ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು, ಸ್ವಾಮೀಜಿಗಳು ರಾಜಣ್ಣನವರನ್ನು ಭೇಟಿಯಾದರು.
ಬಳಿಕ ಒಂದು ಗಂಟೆಗೂ ಅಧಿಕ ಕಾಲ ರಾಜಣ್ಣನ ಜೊತೆ ಚರ್ಚೆ ನಡೆಸಿದ 15ಕ್ಕೂ ಹೆಚ್ಚು ಸ್ವಾಮಿಜಿಗಳು ಸಚಿವ ಸ್ಥಾನದಿಂದ ತೆರವು ವಿಚಾರಕ್ಕೆ ಬೇಸರ ವ್ಯಕ್ತಪಡಿಸುವುದರ ಜೊತೆಗೆ ನಿಮ್ಮ ಜೊತೆ ನಾವಿದ್ದೇವೆ ಎಂಬ ಮಾತುಗಳನ್ನಾಡಿದರು.
ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜಣ್ಣನ ಸಚಿವ ಸ್ಥಾನದಿಂದ ಕೈ ಬಿಟ್ಟಿರೋದು ಆಘಾತಕಾರಿ ವಿಚಾರ. ಇದು ರಾಜಣ್ಣನವರಿಗೆ ಆದ ನಷ್ಟವಲ್ಲ ಬದಲಾಗಿ ರಾಜ್ಯದ ಜನತೆಗೆ ಆದ ನಷ್ಟ. ಒಬ್ಬ ಹಿಂದುಳಿದ ನಾಯಕನಿಗೆ ಸಮಯ ಕೊಡಬೇಕಿತ್ತು. ಹೈಕಮಾಂಡ್ ಈ ವಿಚಾರ ಗಂಭೀರವಾಗಿ ಪರಿಗಣಿಸಿ ಮತ್ತೆ ರಾಜಣ್ಣನಿಗೆ ಸಚಿವ ಸ್ಥಾನ ಕೊಡಬೇಕು ಅಂತ ಒತ್ತಾಯ ಮಾಡಿದರು.
ರಾಜಣ್ಣನಿಗೆ ಪುನಃ ಸಚಿವ ಸ್ಥಾನ ನೀಡಬೇಕೆಂದು ದಲಿತ ಹಿಂದುಳಿದ ವರ್ಗಗಳ ಒಕ್ಕೂಟದ ಸ್ವಾಮೀಜಿಗಳು ಹೈಕಮಾಂಡ್ ಭೇಟಿಗೆ ನಿರ್ಧಾರ ಮಾಡಿದ್ದೇವೆ. ಒಂದು ರಾಷ್ಟ್ರೀಯ ಪಕ್ಷ ಒಬ್ಬರಿಗೆ ಒಂದು ನ್ಯಾಯ ಮತ್ತೊಬ್ಬರಿಗೆ ಒಂದು ನ್ಯಾಯ ಮಾಡಬಾರದು. ದಲಿತ ಮತ ಚದುರದಂತೆ ನೋಡಿಕೊಳ್ಳಬೇಕು. ಹಾಗಾಗಿ ರಾಜಣ್ಣರಿಗೆ ಮತ್ತೆ ಸಚಿವ ಸ್ಥಾನಮಾನ ಕೊಡಬೇಕೆಂದು ಒತ್ತಾಯ ಮಾಡುತ್ತೇವೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC