ಮಧುಗಿರಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ತುಮಕೂರು ಜಿಲ್ಲೆ -2 ಇವರ ವತಿಯಿಂದ ಜು.6 ರ ಬೆಳಗ್ಗೆ 11 ಗಂಟೆಗೆ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಸ್ವ-ಉದ್ಯೋಗ ಮೇಳ ಮತ್ತು ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶದ ಉದ್ಘಾಟನೆಯನ್ನು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನೆರವೇರಿಸಲಿದ್ದಾರೆ ಎಂದು ಟ್ರಸ್ಟ್ ನ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಎಂ.ಶೀನಪ್ಪ ತಿಳಿಸಿದರು.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಾಸಕ ಎಂ.ವಿ.ವೀರಭಧ್ರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವಸ್ತುಪ್ರದರ್ಶನದ ಉದ್ಘಾಟನೆಯನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ನೆರವೇರಿಸಲಿದ್ದಾರೆ. 44ನೇ ನಮ್ಮ ಊರು ನಮ್ಮ ಕೆರೆ ಲೋಕಾರ್ಪಣೆಯನ್ನು ಸಂಸದ ಜಿ.ಎಸ್.ಬಸವರಾಜು ಮಾಡಲಿದ್ದು, ಶಾಸಕ ಡಾ.ಜಿ.ಪರಮೇಶ್ವರ್ ಸುಜ್ಞಾನ ನಿಧಿ ಶಿಷ್ಯ ವೇತನವನ್ನು, ಡಾ.ಎಚ್.ಎಲ್.ಮಂಜುನಾಥ್ ಜನಮಂಗಲ ಸಲಕರಣೆ ವಿತರಣೆಯನ್ನು, ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಆರೋಗ್ಯ ರಕ್ಷಾ ಸೌಲಭ್ಯ ವಿತರಣೆಯನ್ನು, ಎಂ.ಚಿದಾನಂದಗೌಡ ಮಾಶಾಸನ ಪತ್ರಗಳನ್ನು, ಎಂ.ಆರ್.ಮನೋಹರ್ ಲಾಭಾಂಶ ಪತ್ರ ವಿತರಣೆಯನ್ನು ಮಾಡಲಿದ್ದಾರೆ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ತಿಮ್ಮರಾಜು, ಎಸ್.ಕೆ.ರಾಮಚಂದ್ರ ಗುಪ್ತ ಹಾಗೂ ಇನ್ನು ಕೆಲವು ಗಣ್ಯರು ಉಪಸ್ಥಿತರಿರಲಿದ್ದು, ಸರ್ವಧರ್ಮ ಸಮನ್ವಯದಡಿಯಲ್ಲಿ ಈ ಸಭೆಗೆ ಯಾವುದೇ ರಾಜಕೀಯ ಪಕ್ಷಗಳನ್ನು ಬಿಂಬಿಸದೆ ಜಾತ್ಯತೀತ ಮತ್ತು ಪಕ್ಷಾತೀತವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಪೂಜ್ಯರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಮಧುಗಿರಿ ಶ್ರೀ ದಂಡಿನಮಾರಮ್ಮ ದೇವಾಲಯದ ಮುಂಭಾಗದಿಂದ ರಾಜೀವ್ ಗಾಂಧಿ ಕ್ರೀಡಾಂಗಣಕ್ಕೆ ಬೃಹತ್ ಮೆರವಣಿಗೆ ಮೂಲಕ ಕರೆತರಲಾಗುವುದು. ಸ್ವ ಉದ್ಯೋಗ ಮಳಿಗೆಗಳ ಉದ್ಘಾಟನೆ, ಬ್ಯಾಂಕಿನ ನೆರವಿನ ಮೂಲಕ ಮಹಿಳಾ ಸಬಲೀಕರಣ ಮತ್ತಿತರ ಕಾರ್ಯಕ್ರಮಗಳು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ, ತಾಲೂಕು ಯೋಜನಾಧಿಕಾರಿಗಳಾದ ದಿನೇಶ್ ಕುಮಾರ್ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷ ಸಿಸ್ಟಲ್ ಮಂಜುನಾಥ್, ಸದಸ್ಯರುಗಳಾದ ಎಂ.ಜಿ.ಶ್ರೀನಿವಾಸ್ ಮೂರ್ತಿ, ತುಂಗೋಟಿ ರಾಮಣ್ಣ, ಪುರಸಭೆ ಸದಸ್ಯರಗಳಾದ ಎಂ.ಎಲ್.ಗಂಗರಾಜ್, ಎಂ.ಆರ್.ಜಗನಾಥ್, ಲಾಲಪೇಟೆ ಮಂಜುನಾಥ್, ಆಚಾರ್ ಮಂಜುನಾಥ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ಎನ್.ಶ್ರೀನಿವಾಸ್, ಮುಖಂಡರುಗಳಾದ ಯತೀಶ್ ಬಾಬು, ರಘು ಯಾದವ್, ಅಶ್ವಥ್ ನಾರಾಯಣ್, ನಾಗುರ್ಜುನ್ ಬಂದ್ರೇಹಳ್ಳಿ ಹಾಗೂ ಮುಂತಾದವರು ಇದ್ದರು.
ವರದಿ : ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB