ತುಮಕೂರು: ಬೇಸಿಗೆ ಸಮೀಪಿಸುತ್ತಿರುವುದರಿಂದ ಜನ–ಜಾನುವಾರುಗಳಿಗೆ ಕುಡಿಯಲು ನೀರಿನ ಸಮಸ್ಯೆ ಬಾರದಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಪಾವಗಡ ತಾಲ್ಲೂಕು ನಾಗೇನಹಳ್ಳಿಗೆ ಬುಧವಾರ ಸಂಜೆ ಭೇಟಿ ನೀಡಿ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆಯನ್ನು ಪರಿಶೀಲಿಸಿ ಮಾತನಾಡಿದ ಅವರು, ಜನರಿಗೆ ನೀರು ಒದಗಿಸುವಲ್ಲಿ ನಿರ್ಲಕ್ಷತೆ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಜನರಿಂದ ದೂರು ಬಾರದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶಿಸಿದರು.
ಗ್ರಾಮಸ್ಥರಿಂದ ಬೇಡಿಕೆ:–
ನಾಗೇನಹಳ್ಳಿ ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕಕ್ಕೆ ಕಾಯಿನ್ ಪದ್ಧತಿಯನ್ನು ಅಳವಡಿಸಬೇಕೆಂದು ಗ್ರಾಮಸ್ಥರ ಮನವಿಯನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸ್ಥಳದಲ್ಲಿದ್ದ ಗ್ರಾಮೀಣ ನೀರು ಸರಬರಾಜು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಸವಲಿಂಗಪ್ಪ ಅವರಿಗೆ ಕೂಡಲೇ ಕಾಯಿನ್ ಪದ್ಧತಿ ಅಳವಡಿಸಲು ಸೂಚನೆ ನೀಡಿದರು.
ಗ್ರಾಮಗಳಿಗೆ ಪ್ರತೀ ದಿನ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಸೂಚಿಸಿದರಲ್ಲದೆ ರಸ್ತೆ ಬದಿಯಲ್ಲಿ ತಿಪ್ಪೆ, ಕಸದ ರಾಶಿಯನ್ನು ಕಂಡ ಅವರು ಗ್ರಾಮದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿರಬೇಕು. ನೈರ್ಮಲ್ಯತೆ ಕಾಪಾಡದಿದ್ದರೆ ಖಾಯಿಲೆಗಳಿಗೆ ಆಹ್ವಾನ ನೀಡಿದಂತೆ. ಅನೈರ್ಮಲ್ಯತೆಯಿಂದ ಜನ-ಜಾನುವಾರುಗಳಿಗೆ ರೋಗ-ರುಜಿನಗಳು ತಗಲುವ ಸಾಧ್ಯತೆ ಇರುತ್ತದೆ. ಜನವಸತಿ ಪ್ರದೇಶಗಳನ್ನು ಸ್ವಚ್ಛವಾಗಿಡಬೇಕು ಎಂದು ಸೂಚಿಸಿದರು.
ನಂತರ ಪಾವಗಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಪಾವಗಡ ಪಟ್ಟಣದ ವ್ಯಾಪ್ತಿಯಲ್ಲಿ ಪ್ರತಿದಿನ ಕುಡಿಯುವ ನೀರಿನ ಸರಬರಾಜು ಮಾಡಬೇಕು. ಈಗಾಗಲೇ ತುಂಗಭದ್ರಾ ನೀರು ಪಾವಗಡದ ವ್ಯಾಪ್ತಿಗೆ ಹರಿಯುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲವೆಂಬ ಭರವಸೆ ಇದೆ ಎಂದು ತಿಳಿಸಿದರು.
ಪಾವಗಡ ಪುರಸಭೆಯ 23 ವಾರ್ಡುಗಳಿಗೂ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು. ಕುಡಿಯುವ ನೀರು ಪೂರೈಸುವುದರಲ್ಲಿ ಲೋಪ ದೋಷ ಕಂಡು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆಯ ಮುಖ್ಯಾಧಿಕಾರಿ ಜಾಫರ್ ಷರೀಫ್ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಧುಗಿರಿ ಉಪವಿಭಾಗಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ವರದರಾಜು, ಆರೋಗ್ಯಾಧಿಕಾರಿ ಶಂಶುದ್ದೀನ್, ಕಂದಾಯ ಇಲಾಖೆಯ ನಿರೀಕ್ಷಕರಾದ ರಾಜ್ ಗೋಪಾಲ್ ಹಾಗೂ ನಾರಾಯಣಪ್ಪ, ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯ ಇಂಜಿನಿಯರ್ಗಳು ಹಾಗೂ ಮತ್ತಿತರ ಅಧಿಕಾರಿಗಳಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4