ಮಧುಗಿರಿ: ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಬೇಸಿಗೆ ಬರುವ ಮುನ್ನವೇ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ನೀಡಿ ನಿವಾರಣೆಗೆ ಮುಂದಾಗಬೇಕು ಎಂದರು.
ಶಿರಾ–ಬೈರೇನಹಳ್ಳಿ ರಾಷ್ಟ್ರೀಯ ಹೆದ್ದಾರಿ ಸರ್ವೆ ಮುಗಿದಿದೆ. ಕಾಮಗಾರಿ ಕೈಗೊಳ್ಳಬೇಕಿದೆ ಎಂದು ಎಇಇ ಲಕ್ಷ್ಮೀಕಾಂತ್ ಮಾಹಿತಿ ನೀಡಿದಾಗ, ರೈತರಿಗೆ ಅನ್ಯಾಯವಾಗದಂತೆ, ತುರ್ತಾಗಿ ಕ್ರಮವಹಿಸಿ ಎಂದು ಸೂಚನೆ ನೀಡಿದರು.
ತಾಲ್ಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 6 ಹಾಗೂ 90 ಸಹಾಯಕಿಯರ ಹುದ್ದೆ ಖಾಲಿ ಇದೆ. ಶೀಘ್ರ ಹುದ್ದೆ ಭರ್ತಿ ಮಾಡಿ ಎಂದರು.
ತಾಲ್ಲೂಕಿನಲ್ಲಿ 6,198 ವಿದ್ಯಾರ್ಥಿ ವೇತನ ಬಂದಿದೆ. ಇನ್ನೂ 7 ಸಾವಿರ ವಿದ್ಯಾರ್ಥಿಗಳು ವೇತನ ಪಡೆಯಲು ಅರ್ಹರಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಕಳೆದ ವರ್ಷ 7 ಸಾವಿರ ವಿದ್ಯಾರ್ಥಿಗಳು ಅರ್ಹರಿದ್ದರೂ ಏಕೆ ವಿದ್ಯಾರ್ಥಿ ವೇತನ ನೀಡಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದೀರಾ ಎಂದು ಕಿಡಿ ಕಾಡಿದರು. ಡಿಸೆಂಬರ್ 20ರೊಳಗೆ ಅರ್ಹ ವಿದ್ಯಾರ್ಥಿಗಳಿಗೆ ವೇತನ ದೊರೆಯುವಂತೆ ಕ್ರಮ ವಹಿಸಬೇಕು ಎಂದು ಸಮಾಜ ಕಲ್ಯಾಣ ಹಾಗೂ ಬಿಸಿಎಂ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದಲ್ಲಿ 10 ವರ್ಷ ಆದರೂ ಯುಜಿಡಿ ಕಾಮಗಾರಿ ಮುಗಿಯುತ್ತಿಲ್ಲ ಎಂದರೆ ಏನರ್ಥ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ, ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಯುಜಿಡಿ ಕಾಮಗಾರಿ ನೆಪದಲ್ಲಿ ರಸ್ತೆ ಅಗೆದರೆ ಅದಕ್ಕೆ ನೀವೇ ಹಣ ನೀಡಿ ಪೂರ್ಣಗೊಳಿಸಬೇಕು. ಅಗಸರ ಹೊಳೆ ಸೇತುವೆ ಮೇಲೆಯೇ ಒಂದು ಪೈಪ್‌ಲೈನ್ ಹಾಕಿದ್ದು, ಅದನ್ನು ಹಾಗೆಯೇ ಬಿಟ್ಟಿದ್ದೀರಾ. ಪೈಪ್ ಒಡೆದು ಸಮಸ್ಯೆ ಆದರೆ ಏನು ಮಾಡುತ್ತೀರಿ? ಸಮರ್ಪಕವಾಗಿ ಮುಚ್ಚಿ ಎಂದು ಎಂಜಿನಿಯಗೆ ತಾಕೀತು ಮಾಡಿದರು.
ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಶ್ರೀನಿವಾಸ್, ತಾ.ಪಂ ಇಒ ಲಕ್ಷ್ಮಣ್, ಟಿಎಪಿಸಿಎಂಎಸ್ ಅಧ್ಯಕ್ಷ ಎಂಎಸ್ ಮಲ್ಲಿಕಾರ್ಜುನಯ್ಯ, ತುಮುಲ್ ನಿರ್ದೇಶಕ ಬಿ ನಾಗೇಶ್ ಬಾಬು, ಯೋಜನಾ ನಿರ್ದೇಶಕ ಧನಂಜಯ, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಚೌಡಪ್ಪ, ಕೆಡಿಪಿ ಸದಸ್ಯರಾದ ನಜೀರ್, ದೇವರಾಜು, ಜಯಲಕ್ಷ್ಮಿ, ಲಕ್ಷ್ಮಿನರಸಯ್ಯ, ಡಿವೈಎಸ್‌ಪಿ ಮಂಜುನಾಥ್, ಲೋಕೋಪಯೋಗಿ ಇಲಾಖೆ ಇಇ ಹನುಮಂತ ರಾವ್, ಎಇಇ ಸಂಪತ್ ಕುಮಾರ್, ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ಜಿ.ಪಂ ಎಇಇ ಮಂಜುನಾಥ ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


