ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ.ಇನ್ನು ಎರಡು ತಿಂಗಳಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಈ ಸಂದರ್ಭದಲ್ಲಿ ಅವರು ತಮ್ಮ ರಾಜಕೀಯ ಜೀವನ ಪ್ರವೇಶದ ಬಗ್ಗೆ ಘೋಷಣೆ ಮಾಡಿದ್ದು, ಅವರ ನೂತನ ಪಕ್ಷಕ್ಕೆ ‘ತಮಿಳಗ ವೆಟ್ರಿ ಕಳಗಂ’ ಎಂದು ಹೆಸರನ್ನು ಘೋಷಿಸಿದ್ದಾರೆ.
ಕಳೆದ ವಾರ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಅವರ ಅಭಿಮಾನಿಗಳ ಸಂಘ ವಿಜಯ್ ಮಕ್ಕಳ್ ಇಯಕ್ಕಂ ರಾಜಕೀಯ ಪಕ್ಷದ ರಚನೆಗೆ ಒಪ್ಪಿಗೆ ನೀಡಿದ ಬಳಿಕ ಇಂದು ತಮ್ಮ ರಾಜಕೀಯ ಪಕ್ಷದ ಹೆಸರನ್ನು ಘೋಷಿಸಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ನಟ ವಿಜಯ್, ನಮ್ಮ ಪಕ್ಷ ‘ತಮಿಳಗ ವೆಟ್ರಿ ಕಳಗಂ’ ನ್ನು ನೋಂದಾಯಿಸಲು ಚುನಾವಣಾ ಆಯೋಗಕ್ಕೆ ಇಂದು ಅರ್ಜಿ ಸಲ್ಲಿಸುತ್ತಿದ್ದೇವೆ, 2026 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಮತ್ತು ಮೂಲಭೂತ ರಾಜಕೀಯ ಬದಲಾವಣೆ ತರುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.


