ಮಂಡ್ಯ: ಶಿಕ್ಷಕಿಯನ್ನು ಕೊಲೆ ಮಾಡಿ ಮಣ್ಣಲ್ಲಿ ಹೂತುಹಾಕಿರುವ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದ್ದು, ಪರಿಚಯಸ್ಥ ಯುವಕನಿಂದಲೇ ಶಿಕ್ಷಕಿಯ ಕೊಲೆ ನಡೆದಿದೆ ಎಂದು ಇದೀಗ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಯಾವಾಗ ಶಿಕ್ಷಕಿ ದೀಪಿಕಾ ಮೃತದೇಹ ಪತ್ತೆಯಾಯಿತು ಅಂದಿನಿಂದ ಯುವಕ ಗ್ರಾಮದಿಂದ ನಾಪತ್ತೆಯಾಗಿದ್ದಾನೆ. ಶಿಕ್ಷಕಿ ದೀಪಿಕಾ ಅವರ ಮೊಬೈಲ್ ಪರಿಶೀಲಿಸಿದಾಗ ಕೊನೆಯದಾಗಿ ಕರೆ ಬಂದಿದ್ದು ಇದೇ ಯುವಕನದ್ದಾಗಿದೆ.
ಜನವರಿ 20ರಂದು ಮೃತ ಶಿಕ್ಷಕಿ ದೀಪಿಕಾಗೆ ಮಧ್ಯಾಹ್ನ 12 ಗಂಟೆಗೆ ಪರಿಚಯಸ್ಥ ಯುವಕನಿಂದ ಕರೆ ಬಂದಿದ್ದು, ಗ್ರಾಮದ ಯುವಕನ ಮೇಲೆ ಪೋಷಕರು ಸಾಕಷ್ಟು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಶ್ರೀರಂಗಪಟ್ಟಣದ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಹಾಗೂ ಯುವಕ ಜಗಳವಾಡುತ್ತಿದ್ದನ್ನು ಪ್ರವಾಸಿಗರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. 13 ಸೆಕೆಂಡ್ ಗಳ ಈ ವಿಡಿಯೋವನ್ನು ಪ್ರವಾಸಿಗರು ಪೊಲೀಸರಿಗೆ ನೀಡಿದ್ದಾರೆ.
ಜನವರಿ 20ರ ನಂತರ ದೀಪಿಕಾ ಶಾಲೆ ಮುಗಿಸಿಕೊಂಡು ಬರುವಾಗ ಅಡ್ಡಗಟ್ಟಿ ಹತ್ಯೆಗೈದು ಬೆಟ್ಟದ ತಪಲಿನಲ್ಲಿ ಗುಂಡಿ ತೆಗೆದು ಮೃತದೇಹವನ್ನು ಮುಚ್ಚಿದ್ದಾನೆ. ಇದೀಗ ನಾಪತ್ತೆಯಾಗಿರುವ ಯುವಕನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.


