ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಶಿಕ್ಷಕಿ ದೀಪಿಕಾ ಅವರನ್ನು ಕೊಲೆ ಮಾಡಲಾಗಿದ್ದ ಪ್ರಕರಣ ಸಂಬಂಧ ತನಿಖೆ ಆರಂಭಿಸಿದ್ದ ಪೊಲೀಸರು, ಪ್ರಕರಣ ನಡೆದ 30 ಗಂಟೆಗಳ ಒಳಗಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿತೀಶ್ (21) ಬಂಧಿತ ಆರೋಪಿಯಾಗಿದ್ದಾನೆ. ಡಿವೈಎಸ್ ಪಿ ಮುರಳಿ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ವಿಚಾರಣೆ ವೇಳೆ ದೀಪಿಕಾರನ್ನು ಪ್ಲ್ಯಾನ್ ಮಾಡಿಯೇ ಕೊಲೆ ಮಾಡಿರುವುದು ತಿಳಿದು ಬಂದಿದೆ. ಕೊಲೆಗೂ ಮುನ್ನ ನಿತೀಶ್ ಗುಂಡಿ ತೆಗೆದಿದ್ದನು. ನಂತರ ದೀಪಿಕಾರನ್ನು ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಅಡ್ಡಗಟ್ಟಿ ಕೊಲೆ ಮಾಡಿ ಹೂತು ಹಾಕಿದ್ದನು ಎಂದು ತಿಳಿದುಬಂದಿದೆ.
ದೀಪಿಕಾರನ್ನು ಕೊಲೆಗೈದ ನಂತರ ಎರಡು ದಿನಗಳ ಕಾಲ ನಿತೇಶ್ ಗ್ರಾಮದಲ್ಲೇ ಇದ್ದನು. ಬಳಿಕ ಯಾವಾಗ ದೀಪಿಕಾಳ ಶವ ಪತ್ತೆಯಾಯ್ತೋ ಅಂದಿನಿಂದ ನಾಪತ್ತೆಯಾಗಿದ್ದನು. ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿ ನಿತೇಶ್ ನನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಂಧಿಸಿದ್ದಾರೆ. ಸದ್ಯ, ಆರೋಪಿಯನ್ನು ಮೇಲುಕೋಟೆ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದ್ದು, ಕೊಲೆ ಮಾಡಿರುವುದು ತಾನೇ ಎಂದು ಒಪ್ಪಿಕೊಂಡಿದ್ದಾನೆ.


