ಬೀದರ್: ಸ್ಕಾರ್ಪಿಯೋ ಹಾಗೂ ದ್ವಿಚಕ್ರ ವಾಹನ ಮಧ್ಯೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಬೀದರ್ – ಔರಾದ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಧರಿ ಹನುಮಾನ್ ದೇವಾಸ್ಥಾನದ ಬಳಿ ಗುರುವಾರ ಸಂಜೆ ನಡೆದಿದೆ.
ಔರಾದ ತಾಲೂಕಿನ ಧುಪತಮಹಾಗಾಂವ ಗ್ರಾಮದ ಸುಖದೇವ್ (38) ಹಾಗೂ ಲಾಧಾ ಗ್ರಾಮದ ಸಿದ್ದು ಮುಚಳಂಬೆ (40) ಮೃತಪಟ್ಟವರು.
ಸಾವನ್ನಪ್ಪಿದ ಇಬ್ಬರೂ ಜೆಸ್ಕಾಂ ಇಲಾಖೆಯಲ್ಲಿ ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ತವ್ಯ ನಿರ್ವಹಿಸಿ ಗ್ರಾಮದಿಂದ ಸಂತಪೂರ ಜೆಸ್ಕಾಂ ಇಲಾಖೆ ಕಛೇರಿಗೆ ತೆರಳುವ ವೇಳೆ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಕಾರ್ಪಿಯೋ ಹಾಗೂ ಇಂಡಿಕಾ ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರರು ಇಬ್ಬರು ಈ ಅಪಘಾತದಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಸಂತಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ, ಸ್ಥಳಕ್ಕೆ ಔರಾದ ಸಿಪಿಐ ರಘುವೀರ್ ಸಿಂಗ್ ಠಾಕೂರ್ ಹಾಗೂ ಪಿಇಎಸ್ ಮೆಹಬೂಬ್ ಅಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್