ಬ್ಯಾಂಕಾಕ್: ಪ್ರೀತಿ ಹಾಗೂ ಮದುವೆ ವಿಚಾರದಲ್ಲಿ ಜಗತ್ತಿನಲ್ಲಿ ಆಗಾಗ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಥೈಲ್ಯಾಂಡ್ ನ ಮಹಿಳೆಯೊಬ್ಬರು ಒಂದೇ ಮಂಟಪದಲ್ಲಿ ಇಬ್ಬರು ಪುರುಷರನ್ನು ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಏನಿದು ಘಟನೆ?
ಥೈಲ್ಯಾಂಡ್ನ ಪ್ರಖೋನ್ ಚಾಯ್ ಜಿಲ್ಲೆಯ 37 ವರ್ಷದ ಡುವಾಂಗ್ಡುವಾನ್ ಕೆಟ್ಸಾರೊ ಎಂಬ ಮಹಿಳೆ ಈ ಸಾಹಸಕ್ಕೆ ಕೈಹಾಕಿದವರು. ಮಾಜಿ ಗಾಯಕಿ ಹಾಗೂ ಹಾಡು ಬರಹಗಾರ್ತಿಯಾಗಿರುವ ಇವರು, ಆಸ್ಟ್ರೇಲಿಯಾ ಮೂಲದ ಇಬ್ಬರು ಪುರುಷರನ್ನು ಏಕಕಾಲಕ್ಕೆ ವರಿಸಿದ್ದಾರೆ. ಇವರ ಪತಿಯರಲ್ಲಿ ಒಬ್ಬರು ಆಸ್ಟ್ರೇಲಿಯಾದ ನಿವೃತ್ತ ಪೊಲೀಸ್ ಅಧಿಕಾರಿ ರೋಮನ್ ಹಾಗೂ ಮತ್ತೊಬ್ಬರು ರೋಮನ್ ಅವರ ಸ್ನೇಹಿತ ಮ್ಯಾಕಿ.
ಕಳೆದ 5 ವರ್ಷಗಳಿಂದ ಡುವಾಂಗ್ಡುವಾನ್ ಈ ಇಬ್ಬರ ಜೊತೆಗೂ ಡೇಟಿಂಗ್ ಮಾಡುತ್ತಿದ್ದರು. ಮೊದಲು ರೋಮನ್ ಅವರ ಪರಿಚಯವಾಗಿತ್ತು, ನಂತರ ಅವರ ಮೂಲಕ ಮ್ಯಾಕಿ ಪರಿಚಯವಾಯಿತು. ಐದು ವರ್ಷಗಳ ಕಾಲ ಮೂವರೂ ಪರಸ್ಪರ ಸಂಬಂಧದಲ್ಲಿದ್ದರು. ಕೊನೆಗೆ ಇಬ್ಬರನ್ನೂ ಮದುವೆಯಾಗಲು ನಿರ್ಧರಿಸಿದ ಮಹಿಳೆಗೆ ಇಬ್ಬರು ವರರು ಕೂಡ ಒಪ್ಪಿಗೆ ನೀಡಿದ್ದರು.
29 ಲಕ್ಷ ರೂ. ವಧುದಕ್ಷಿಣೆ!:
ಫೆಬ್ರವರಿ 28 ರಂದು ನಡೆದ ಈ ವಿಶಿಷ್ಟ ವಿವಾಹ ಸಮಾರಂಭದಲ್ಲಿ ಸ್ಥಳೀಯ ಸಂಪ್ರದಾಯದಂತೆ ವಿಧಿವಿಧಾನಗಳು ನಡೆದವು. ವಿಶೇಷವೆಂದರೆ, ಈ ಮದುವೆಗಾಗಿ ಇಬ್ಬರು ಪತಿಯರು ಸೇರಿ ಒಟ್ಟು 1 ಮಿಲಿಯನ್ ಬಹ್ತ್ (ಸುಮಾರು 29 ಲಕ್ಷ ರೂಪಾಯಿ) ವಧುದಕ್ಷಿಣೆಯನ್ನು (Sinsod) ನೀಡಿದ್ದಾರೆ.
ಮೊದಲ ಮದುವೆ ಅಲ್ಲ: ಡುವಾಂಗ್ಡುವಾನ್ಗೆ ಇದು ಮೊದಲ ಮದುವೆಯಲ್ಲ. ಅವರಿಗೆ ಈ ಹಿಂದಿನ ಮದುವೆಯಿಂದ ಮೂವರು ಮಕ್ಕಳು ಮತ್ತು ಇಬ್ಬರು ಮೊಮ್ಮಕ್ಕಳಿದ್ದಾರೆ. ತನ್ನ ಪೋಷಕರು ಮತ್ತು ಮಕ್ಕಳನ್ನು ಈ ಇಬ್ಬರು ಪತಿಯರು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿರುವುದನ್ನು ಕಂಡು ಮನೆಯವರೂ ಈ ವಿಚಿತ್ರ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದಾರೆ. “ನನ್ನ ಮಗಳು ಸಾಕಷ್ಟು ಕಷ್ಟಪಟ್ಟಿದ್ದಾಳೆ, ಈಗಲಾದರೂ ಅವಳು ಸುಖವಾಗಿರಲಿ” ಎಂದು ಆಕೆಯ ತಾಯಿ ಹಾರೈಸಿದ್ದಾರೆ.
ಥೈಲ್ಯಾಂಡ್ ಕಾನೂನಿನ ಪ್ರಕಾರ ಬಹುಪತಿತ್ವಕ್ಕೆ (Polygamy) ಅವಕಾಶವಿಲ್ಲ. ಹೀಗಾಗಿ ಈ ಮದುವೆಗೆ ಕಾನೂನುಬದ್ಧ ಮಾನ್ಯತೆ ಇರುವುದಿಲ್ಲ. ಕೇವಲ ಒಂದು ಮದುವೆಯನ್ನು ಮಾತ್ರ ಅಧಿಕೃತವಾಗಿ ನೋಂದಾಯಿಸಲು ಅಲ್ಲಿ ಅವಕಾಶವಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


