ಏರುತ್ತಿರುವ ದೇಶೀಯ ಬೆಲೆಗಳನ್ನು ನಿಯಂತ್ರಿಸುವ ಕ್ರಮಗಳ ಭಾಗವಾಗಿ ಭಾರತ ತಕ್ಷಣವೇ ಜಾರಿಗೆ ಬರುವಂತೆ ಗೋಧಿ ರಫ್ತುಗಳನ್ನು ನಿಷೇಧಿಸಿದೆ. ಗೋಧಿ ರಫ್ತು ನೀತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಡಿಜಿಎಫ್‍ಟಿ ತಿಳಿಸಿದೆ.
ಭಾರತ ಸರ್ಕಾರವು ಇತರ ದೇಶಗಳಿಗೆ ಅವರ ಆಹಾರ ಭದ್ರತೆ ಅಗತ್ಯತೆಗಳನ್ನು ಪೂರೈಸಲು ಮತ್ತು ಆ ಸರ್ಕಾರಗಳ ಕೋರಿಕೆಯ ಮೇರೆಗೆ ನೀಡುವ ಅನುಮತಿಯನ್ನು ಆಧರಿಸಿ ಗೋಧಿ ರಫ್ತಿಗೆ ಅನುಮತಿಸಲಾಗುವುದು ಎಂದು ಸ್ಪಷ್ಟ ಪಡಿಸಲಾಗಿದೆ. ಪ್ರತ್ಯೇಕ ಅಧಿಸೂಚನೆಯಲ್ಲಿ ಈರುಳ್ಳಿ ಬೀಜಗಳ ರಫ್ತು ಷರತ್ತುಗಳನ್ನು ಸಡಿಲಿಸುವುದಾಗಿ ಡಿಜಿಎಫ್‍ಟಿ ತಿಳಿಸಿತ್ತು.
ಈ ಹಿಂದೆ ಈರುಳ್ಳಿ ರಫ್ತು ಮಾಡುವುದನ್ನು ನಿಷೇಧಿಸಲಾಗಿತ್ತು. ಈ ವಾರ ಬಿಡುಗಡೆಯಾದ ಅಧಿಕೃತ ಮಾಹಿತಿಯ ಪ್ರಕಾರ ಇಂಧನ ಮತ್ತು ಆಹಾರ ಪದಾರ್ಥಗಳ ಬೆಲೆ ಹೆಚ್ಚಳದಿಂದ ಹಣದುಬ್ಬರದಲ್ಲಿ ಏರಿಕೆ ಕಂಡುಬಂದಿದೆ. ಚಿಲ್ಲರೆ ಹಣದುಬ್ಬರವು ಏಪ್ರಿಲ್‍ನಲ್ಲಿ ಎಂಟು ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದೆ ಎಂದು ತಿಳಿದು ಬಂದಿದೆ.
ಆಹಾರಧಾನ್ಯದ ಪ್ರಮುಖ ರಫ್ತುದಾರರಾಗಿರುವ ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದ ಜಾಗತಿಕ ಗೋ ಪೂರೈಕೆಯಲ್ಲಿ ಏರುಪೇರಾಗಿದೆ. 2021-22ರಲ್ಲಿ ಭಾರತದ 2.05 ಬಿಲಿಯನ್ ಡಾಲರ್ ಮೌಲ್ಯದ 7 ಮಿಲಿಯನ್ ಟನ್ ಗೋಧಿ ರಫ್ತು ಮಾಡಿತ್ತು. ಒಟ್ಟು ಗೋಧಿ ರಫ್ತಿನಲ್ಲಿ, ಕಳೆದ ಹಣಕಾಸು ವರ್ಷದಲ್ಲಿ ಸುಮಾರು ಶೇ.50ರಷ್ಟನ್ನು ಬಾಂಗ್ಲಾದೇಶಕ್ಕೆ ರವಾನಿಸಲಾಗಿತ್ತು.
ಕಳೆದ ವರ್ಷ ಇದೇ ಅವಧಿಯಲ್ಲಿ 130,000 ಟನ್ ರಫ್ತು ನಡೆದಿತ್ತು, ಈ ವರ್ಷ ಸುಮಾರು 9.63 ಲಕ್ಷ ಟನ್ ರಫ್ತು ಮಾಡಲಾಗಿದೆ. ಪ್ರಸಕ್ತ 2022-23ರಲ್ಲಿ 10 ಮಿಲಿಯನ್ ಟನ್ ಗೋಧಿ ರಫ್ತು ಮಾಡುವ ಗುರಿ ಹೊಂದಿತ್ತು.
ಈ ಮೊದಲು ಗೋಧಿ ಸಾಗಣೆಯನ್ನು ಹೆಚ್ಚಿಸುವ ಸಾಧ್ಯತೆಗಳನ್ನು ಅನ್ವೇಷಿಸಲು ಭಾರತವು ಮೊರಾಕೊ, ಟುನೀಶಿಯಾ, ಇಂಡೋನೇಷ್ಯಾ, ಫಿಲಿಪೈನ್ಸ್, ಥೈಲ್ಯಾಂಡ್, ವಿಯೆಟ್ನಾಂ, ಟರ್ಕಿ, ಅಲ್ಜೀರಿಯಾ ಮತ್ತು ಲೆಬನಾನ್ ಸೇರಿ ಒಂಬತ್ತು ದೇಶಗಳಿಗೆ ವ್ಯಾಪಾರ ನಿಯೋಗಗಳನ್ನು ಕಳುಹಿಸಲಿದೆ ಎಂದು ವಾಣಿಜ್ಯ ಸಚಿವಾಲಯ ಇತ್ತೀಚೆಗೆ ಹೇಳಿತ್ತು. ಈಗ ಏಕಾಏಕಿ ರಫ್ತು ನಿಷೇಸಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB