ಬೆಂಗಳೂರು: ಡಿಸೆಂಬರ್ 19 ರಂದು ಬೇಗೂರು ಬಳಿಯ ಲಕ್ಷ್ಮಿ ಬಡಾವಣೆಯಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಐವರಿಗೆ ಗಾಯವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಗಾಯಗೊಂಡಿದ್ದ ಮಗು, ತಂದೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಎರಡೂವರೆ ವರ್ಷದ ಮಗು ರೋಹನ್ ಮತ್ತು ತಂದೆ ಸಂದೇಶ್(30) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಉಳಿದ ಮೂವರು ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.
ಡಿ.19 ರಂದು ಬೇಗೂರು ಠಾಣಾ ವ್ಯಾಪ್ತಿಯ ಗಾರ್ವೆಬಾವಿಪಾಳ್ಯದ ಲಕ್ಷ್ಮೀ ಲೇಔಟ್ನಲ್ಲಿ ಸುಬ್ರಮಣಿ ಎಂಬುವರಿಗೆ ಸೇರಿದ ಕಟ್ಟಡದಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಐವರು ಗಾಯಗೊಂಡಿದ್ದರು.
ಘಟನೆಯಲ್ಲಿ ಉತ್ತರ ಪ್ರದೇಶ ಮೂಲದ ಸಂದೇಶ್(30), ಆತನ ನಾದಿನಿ ನಿಖೀಲಾ(26) ಮತ್ತು ಮೂವರು ಮಕ್ಕಳಾದ ರೋಷಿಣಿ, ರೋಹನ್ ಹಾಗೂ ರೋಷನ್ ಎಂಬುವರು ಗಾಯಗೊಂಡಿದ್ದರು. ಆದರೆ ಈಗ ಸಂದೇಶ್ ಹಾಗೂ ರೋಹನ್ ಸಾವನ್ನಪ್ಪಿದ್ದಾರೆ.


