ಪಾವಗಡ: ಕರ್ನಾಟಕ ರಾಜ್ಯದ ಸುಪ್ರಸಿದ್ಧ ಅಂತ್ಯ ಸುಬ್ರಮಣ್ಯೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮಂಗಳವಾರ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗಿದೆ, ಪಾವಗಡ ತಾಲೂಕಿನ ನಾಗಲಮಡಿಕೆ ಗ್ರಾಮದಲ್ಲಿ ನಡೆಯುವ ಈ ಜಾತ್ರೆಗೆ ಆಂಧ್ರ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸ್ವಾಮಿಗೆ ನಮಿಸುತ್ತಾರೆ.
ಬೆಳಗಿನ ಜಾವದಿಂದಲೇ ಸುಬ್ರಮಣ್ಯೇಶ್ವರ ಸ್ವಾಮಿಗೆ ಶಾಸ್ತ್ರೋಕ್ತವಾಗಿ ವಿವಿಧ ಪೂಜಾ ಕೈಂಕರಿಗಳನ್ನು ನೆರವೇರಿಸಿದ್ದು, ಸ್ವಾಮಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿತ್ತು.
ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ದೇವಸ್ಥಾನದ ಬ್ರಹ್ಮ ರಥೋತ್ಸವಕ್ಕೆ ವಿಶೇಷ ಹೋಮ ಹವನಗಳನ್ನು ನಡೆಸಿ ಶಾಸಕರಾದ ಎಚ್ ವಿ ವೆಂಕಟೇಶ್ ಹಾಗೂ ಪಾವಗಡ ತಹಸಿಲ್ದಾರ್ ಡಿಎನ್ ವರದರಾಜ ಅವರು ರಥ ಎಳೆಯುವ ಮೂಲಕ ಚಾಲನೆ ನೀಡಿದ್ದರು.
ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎಚ್ ವಿ ವೆಂಕಟೇಶ್, ಕೆಲ ಕಾರಣಾಂತರಗಳಿಂದಾಗಿ ಅಂತ್ಯ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಕುಂಠಿತವಾಗಿದೆ, ದೇವಸ್ಥಾನದಲ್ಲಿ ಪಾರುಪತ್ತೆ ನಡೆಸುವವರ ಮತ್ತು ಪ್ರಧಾನ ಅರ್ಚಕರ ನಡುವಿನ ಗುದ್ದಾಟ ಒಂದು ಕಾರಣವಾಗಿದೆ, ಇದನ್ನೇ ಮುಂದುವರಿಸಿಕೊಂಡು ಬರುತ್ತಿದ್ದಾರೆ, ಇತ್ತೀಚಿಗಷ್ಟೇ ದೇವಸ್ಥಾನದ ಪ್ರಧಾನ ಅರ್ಚಕರಾದ ಬದ್ರಿನಾಥ್ ಅವರನ್ನು ಕರೆಸಿ ಸಮಾಲೋಚನೆ ಮಾಡಿ ನೀವಿಬ್ಬರೂ ಅನುಸರಿಸಿಕೊಂಡು ಹೋದರೆ ಮಾತ್ರ ದೇವಸ್ಥಾನ ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದ್ದೇನೆ.
ಕೆಲವೇ ದಿನಗಳಲ್ಲಿ ರಾಜ್ಯದ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರ ಬಳಿ ದೇವಸ್ಥಾನದ ಅಭಿವೃದ್ಧಿಯ ಕುರಿತು ಚರ್ಚೆ ಮಾಡಲಿದ್ದೇನೆ. ಈಗಾಗಲೇ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬೇಕಾಗಿರುವಂತಹ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ವರದಿ ತಯಾರಿಸುವಂತೆ ಅಧಿಕಾರಿಗಳಿಗೂ ಸೂಚಿಸಿದ್ದೇನೆ. ಅದೇ ರೀತಿ ದೇವಸ್ಥಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನೂರಕ್ಕೆ ನೂರರಷ್ಟು ಪ್ರಾಮಾಣಿಕ ಪ್ರಯತ್ನ ಮಾಡಿ ಮುಂದಿನ ವರ್ಷ ಜಾತ್ರೆಯ ಸಮಯಕ್ಕೆ ಜನರು ಶುಭ ಸುದ್ದಿಯನ್ನು ಕೇಳಲಿದ್ದಾರೆ ಎಂದರು
ಇನ್ನು ಈ ಸಂದರ್ಭದಲ್ಲಿ ತಹಸೀಲ್ದಾರ್ ಡಿ. ಎನ್. ವರದರಾಜು,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು, ಪಾವಗಡ ಪುರಸಭೆಯ ಸದಸ್ಯರಾದ ಪಿ ಎಚ್ ರಾಜೇಶ್, ಕಲ್ಪವೃಕ್ಷ ರವಿ, ಮುಖಂಡರಾದ ವೆಂಕಟಮ್ಮನಹಳ್ಳಿ ನಾನಿ, ಆರ್ ಎನ್ ಅಶ್ವಥ್, ನಾಗಲಮಡಿಕೆ ಮಂಜುನಾಥ್, ನಾಗರಾಜು, ಶಿರಸ್ತೆದಾರರಾದ ಎನ್ ಮೂರ್ತಿ, ಆರ್ ಐ ರಾಜಗೋಪಾಲ್, ಕಿರಣ್ ಕುಮಾರ್, ರವಿಕುಮಾರ್, ನಾರಾಯಣ್, ಪ್ರಧಾನ ಅರ್ಚಕರಾದ ಬದ್ರಿನಾಥ್, ಸಿಪಿಐ ಗಿರೀಶ್, ಸಿಬ್ಬಂದಿ ತಿಮ್ಮಾರೆಡ್ಡಿ ಆಸೀಸ್ ಮಧುಸೂದನ್ ಸೇರಿದಂತೆ ಹಲವರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ


