ಇದೀಗ ಗ್ರಾಹಕರು ವಸ್ತುಗಳನ್ನು ಖರೀದಿಸಲು ಅಂಗಡಿಗೆ ಎಂಟ್ರಿಯಾದ್ರೆ ಸಾಕು. ಕಿಸೆ ಖಾಲಿಯಾಗುವಷ್ಟರ ಮಟ್ಟಿಗೆ ದಿನನಿತ್ಯ ಬಳಕೆಯ ವಸ್ತಗಳ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದೆ. ಅಂತೆಯೇ ಕೋಳಿ ಮಾಂಸ ಸೇರಿದಂತೆ ಕುರಿ,ಹಂದಿ ಮಾಂಸ ದರವೂ ಏರಿಕೆಯಾಗಿದೆ.
ಹಂದಿ ಪೂರೈಕೆಯಲ್ಲಿ ಕುಸಿತ ಹಾಗೂ ಇನ್ನಿತರ ಕಾರಣಗಳಿಂದ ಹಂದಿ ಮಾಂಸ ಧಾರಣೆಯಲ್ಲಿ ದಿಢೀರ್ ಏರಿಕೆ ಕಂಡಿದೆ ಎನ್ನಲಾಗಿದೆ.ಇದರಿಂದಾಗಿ ಹಂದಿ ಸಾಕಣೆದಾರರಿಗೆ ಸಿಹಿ ನ್ಯೂಸ್ ಆದ್ರೆ, ಹಂದಿ ಮಾಂಸ ಪ್ರಿಯರಿಗೆ ಕಹಿ ನ್ಯೂಸ್ ಆಗಿದೆ.ಕರಾವಳಿ ಜಿಲ್ಲೆಯಲ್ಲಿ ಮೀನು,ಕೋಳಿ,ಕುರಿ-ಆಡಿನ ಮಾಂಸದಂತೆಯೇ ಹಂದಿ ಮಾಂಸಕ್ಕೂ ಸಾಕಷ್ಟು ಡಿಮ್ಯಾಂಡ್ ಇದ್ದು,ಗ್ರಾಮೀಣ ಭಾಗದಲ್ಲಂತೂ ಹಂದಿ ಮಾಂಸ ಪ್ರಿಯರು ಹೆಚ್ಚು ಇದ್ದಾರೆ.
ತಿಂಗಳ ಹಿಂದೆ ಸರಾಸರಿ ಕೆ.ಜಿ.ಗೆ 240 ರೂ.ಇದ್ದು, ಇದೀಗ ಬೆಲೆ ಏಕಾಏಕಿ 440 ರೂ.ಗೆ ಏರಿಕೆ ಕಂಡಿದೆಯೆನ್ನುವ ಸುದ್ದಿಯಿದೆ. ಬಳಿಕ 300ಕ್ಕೆ ಇಳಿದಿತ್ತು. ಪ್ರಸ್ತುತ 280ರಿಂದ 330 ರೂ. ಆಸುಪಾಸಿನಲ್ಲಿದೆ. ಈಗ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಂದಿ ಮಾಂಸಕ್ಕೆ ಬೇಡಿಕೆ ಇದ್ದು ಗ್ರಾಹಕರಿಗೆ ಸಹಜವಾಗಿ ತಲೆ ನೋವಾಗಿ ಪರಿಣಮಿಸಿದೆ. ಉತ್ತಮ ಬೆಲೆಯ ಹಿನ್ನೆಲೆಯಲ್ಲಿ ಸ್ಥಳೀಯ ಹಂದಿ ಸಾಕಣೆದಾರರು ಲಾಭವನ್ನು ಕಂಡುಕೊಳ್ಳುತ್ತಿದ್ದಾರೆ. ಹೀಗಾಗಿ ಹಂದಿ ಸಾಕಣೆದಾರರಿಗೂ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಆಗುವುದರಿಂದಲೂ ಅವರಲ್ಲಿ ಹಂದಿಗಳ ಸಂಖ್ಯೆ ಕಡಿಮೆಯಾಗುತ್ತ ಬರುತ್ತಿದೆ.
ಇನ್ನು ಕೆಲವರು ಹಂದಿ ಸಾಕಣೆಯನ್ನೇ ಕೈ ಬಿಟ್ಟಿದ್ದಾರೆ. ಅದು ತುಂಬಾ ಸವಾಲಿನ ಕೆಲಸ ಹಾಗೂ ಶ್ರಮಕ್ಕೆ ತಕ್ಕಂತೆ ನಿರೀಕ್ಷಿತ ಆದಾಯ ಸಿಗದೇ ಇರುವ ಹಿನ್ನಲೆ ಕೆಲವರು ಈ ಉದ್ಯಮವನ್ನು ಮಾಡೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ.


