ಹಾಸನ: ರಸ್ತೆಯಲ್ಲಿ ಪಂಕ್ಚರ್ ಆಗಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಆಲೂರಿನ ಕೂಡಿಗೆಯಲ್ಲಿ ನಡೆದಿದೆ. ಪ್ರದೀಪ್ (30), ಗುರು (25) ಅಪಘಾತದಲ್ಲಿ ಮೃತಪಟ್ಟವರಾಗಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಜಾನೆ ಹೋಟೆಲ್ ಒಂದರ ಪೂಜೆಗೆ ಹೊರಟಿದ್ದ ವೇಳೆ ಈ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ. ಟೈರ್ ಪಂಕ್ಚರ್ ಆಗಿ ರಸ್ತೆ ಮಧ್ಯೆಯೇ ಟಿಂಬರ್ ತುಂಬಿದ್ದ ಲಾರಿ ನಿಂತಿತ್ತು. ಮುಂಜಾನೆ ಮಂಜು ಆವರಿಸಿದ್ದ ಕಾರಣ ಕಾರಿನ ಚಾಲಕನಿಗೆ ಲಾರಿ ನಿಂತಿರುವುದು ಗಮನಕ್ಕೆ ಬಂದಿಲ್ಲ. ಇದರಿಂದ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆಯಲ್ಲಿ ಉರುಳಿ ಬಿದ್ದಿದೆ.
ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


