ತುಮಕೂರು: ಹೆತ್ತ ತಾಯಿಯನ್ನೇ ಮಗಳೊಬ್ಬಳು ಉಸಿರುಗಟ್ಟಿಸಿ ಕೊಲೆ ಮಾಡಿ, ನಂತರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಿ ಅಂತ್ಯಕ್ರಿಯೆಗೆ ಮುಂದಾಗಿದ್ದ ಭೀಕರ ಘಟನೆ ತುಮಕೂರು ನಗರದ ಶ್ರೀನಗರದಲ್ಲಿ ಬೆಳಕಿಗೆ ಬಂದಿದೆ.
ಏನಿದು ಘಟನೆ?
ತುಮಕೂರು ನಗರದ ಶ್ರೀನಗರ ನಿವಾಸಿ ಪುಷ್ಪಲತಾ ಎಂಬುವವರು ಮಗಳು ಸುಚಿತ್ರಾ ಮತ್ತು ಅಳಿಯ ಸುರೇಶ್ ಜೊತೆ ವಾಸವಿದ್ದರು. ಕಳೆದ ಫೆಬ್ರವರಿ 11ರಂದು ರಾತ್ರಿ ಪುಷ್ಪಲತಾ ನಿಗೂಢವಾಗಿ ಸಾವನ್ನಪ್ಪಿದ್ದರು. ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ನಂಬಿಸಿದ ಸುಚಿತ್ರಾ, ರಾತ್ರೋರಾತ್ರಿ ಶವವನ್ನು ಸಂಬಂಧಿಕರ ಮನೆಗೆ ಸಾಗಿಸಿ ಅಂತ್ಯಕ್ರಿಯೆ ಮಾಡಲು ತರಾತುರಿ ನಡೆಸಿದ್ದಳು.
ಕೊಲೆಗೆ ಕಾರಣವೇನು?
ಪೊಲೀಸರ ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದಿವೆ. ಒಂದು ವರ್ಷದ ಹಿಂದೆ ಸುಚಿತ್ರಾ ತಂದೆ ಬಾಬು ನಾಯಕ್ ಮೃತಪಟ್ಟಿದ್ದರು. ತಂದೆಯ ಸಾವಿನ ಬಗ್ಗೆ ಜ್ಯೋತಿಷಿಯೊಬ್ಬರನ್ನು ವಿಚಾರಿಸಿದಾಗ, “ನಿಮ್ಮ ತಂದೆಯ ಸಾವಿಗೆ ತಾಯಿಯೇ ಕಾರಣ, ಆಕೆ ಮಾಟಮಂತ್ರ ಮಾಡಿಸಿದ್ದಾರೆ. ನಿನಗೂ ಅವರಿಂದ ಅಪಾಯವಿದೆ” ಎಂದು ಜ್ಯೋತಿಷಿ ಹೇಳಿದ್ದ ಎನ್ನಲಾಗಿದೆ. ಇದರಿಂದ ಭಯಗೊಂಡ ಸುಚಿತ್ರಾ, ತಾಯಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾಳೆ. ಇದರೊಂದಿಗೆ, ಇತ್ತೀಚೆಗೆ ಜಾಗ ಮಾರಾಟ ಮಾಡಿ ಬಂದಿದ್ದ ಲಕ್ಷಾಂತರ ರೂಪಾಯಿ ಹಣದ ವಿಚಾರವಾಗಿಯೂ ತಾಯಿ–ಮಗಳ ನಡುವೆ ಗಲಾಟೆ ನಡೆದಿತ್ತು ಎಂದು ತಿಳಿದುಬಂದಿದೆ.
ಪೊಲೀಸ್ ಎಂಟ್ರಿ:
ಅಂತ್ಯಕ್ರಿಯೆಯ ಸಮಯದಲ್ಲಿ ಪುಷ್ಪಲತಾ ಅವರ ಮುಖದ ಮೇಲೆ ರಕ್ತದ ಕಲೆಗಳು ಕಂಡುಬಂದಿದ್ದರಿಂದ ಸ್ಥಳೀಯರು ಮತ್ತು ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಕ್ಯಾತಸಂದ್ರ ಪೊಲೀಸರು ತನಿಖೆ ನಡೆಸಿದಾಗ ಮಗಳೇ ಕೃತ್ಯ ಎಸಗಿರುವುದು ಸಾಬೀತಾಗಿದೆ. ಈ ಕೊಲೆಗೆ ಸಹಕರಿಸಿದ ಆರೋಪದ ಮೇಲೆ ಮಗಳು ಸುಚಿತ್ರಾ ಮತ್ತು ಆಕೆಯ ಪತಿ ಸುರೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಸದ್ಯ ಪೊಲೀಸರು ಜ್ಯೋತಿಷಿ ಹೇಳಿದ ಮಾತು ನಿಜವೇ ಅಥವಾ ಕೇವಲ ಹಣಕ್ಕಾಗಿ ಈ ಕೊಲೆ ನಡೆದಿದೆಯೇ ಎಂಬ ಬಗ್ಗೆ ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


