ಒಂದು ಊರಿನಲ್ಲಿ ಒಬ್ಬ ಅಗಸ ಒಂದು ಕತ್ತೆ ಸಾಕಿದ್ದನು. ಅದನ್ನು ಬಟ್ಟೆಗಳನ್ನು ಹೇರಿಕೊಂಡು ನದಿಗೆ ಹೋಗಿ ಒಗೆದು, ಒಣಗಿಸಿ ಮತ್ತೆ ಹೇರಿಕೊಂಡು ಊರಿಗೆ ಬರಲು ಉಪಯೋಗಿಸುತ್ತಿದ್ದನು.
ದಿನಾಲೂ ಬಟ್ಟೆತೂಕ ಹೊರುವುದೇ ಅದರ ಕಾಯಕವಾಗಿತ್ತು. ಒಂದು ದಿನ ರಾತ್ರಿ ಕತ್ತೆ ಮಲಗಿಕೊಂಡು ಹೀಗೆ ಯೋಚಿಸುತ್ತಿತ್ತು. ಈ ಅಗಸ ನನಗೆ ದಿನಾಲೂ ತೂಕ ಹೊರಿಸುತ್ತಾನೆ, ನನಗೂ ತೂಕ ಹೊತ್ತೂ ಹೊತ್ತೂ ಸಾಕಾಗಿ ಹೋಗಿದೆ. ಹೇಗಾದರೂ ಮಾಡಿ ಇವನಿಂದ ತಪ್ಪಿಸಿಕೊಂಡು ಹೋಗಬೇಕಲ್ಲ, ನಾನು ಸ್ವತಂತ್ರ್ಯವಾಗಿ ಬದುಕಬೇಕು ಎಂದುಕೊಂಡು ಸಮಯಕ್ಕಾಗಿ ಕಾಯುತ್ತಿತ್ತು. ಒಂದು ದಿನ ಅಗಸನನ್ನು ನದಿ ಬಳಿ ಬಿಟ್ಟು ಮೇಯಲು ಸ್ವಲ್ಪದೂರವಿದ್ದ ಕಾಡಿಗೆ ಹೋಯಿತು ಅದರ ಎದುರು ನರಿಯೊಂದು ಬಂದಿತು. ನರಿಯನ್ನು ನೋಡಿ ಕತ್ತೆ ಇದರ ಉಪಾಯ ಪಡೆದರೆ ಹೇಗೆ ಎಂದುಕೊಂಡು ನರಿಯನ್ನು ಕರೆದು ತನ್ನ ಕಷ್ಟವನ್ನೆಲ್ಲಾ ಹೇಳಿಕೊಂಡು ಒಂದು ಉಪಾಯ ನೀಡುವಂತೆ ಕೇಳಿಕೊಂಡಿತು.
ನರಿಗೆ ಹಿಂದೆ ಚಿರತೆಯೊಂದು ತನಗಿಷ್ಟವಾದ ಊರಿನ ಕತ್ತೆಯೊಂದನ್ನು ಊಟಕ್ಕಾಗಿ ತಂದು ಕೊಟ್ಟರೆ ನರಿಗೆ ಪ್ರತಿಯಾಗಿ ನರಿ ಕೇಳಿದ ಬೇಟೆಯೊಂದನ್ನು ಮಾಡಿ ಕೊಡುವ ಮಾತು ಕೊಟ್ಟಿತ್ತು, ಇದನ್ನು ಜ್ಞಾಪಿಸಿಕೊಂಡ ನರಿಯು ಈ ಸಂದರ್ಭ ಉಪಯೋಗಿಸಿಕೊಳ್ಳಬೇಕೆಂದು ಹೀಗೆ ಹೇಳಿತು. ನೋಡು ಇಂದು ರಾತ್ರಿ ನಾನು ನೀನಿರುವಲ್ಲಿಗೆ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ, ವಿಶಾಲ ಹುಲ್ಲುಗಾವಲನ್ನು ನಿನಗೆ ಕಾಡಿನಲ್ಲಿ ತೋರಿಸುತ್ತೇನೆ ನೀನು ಆರಾಮವಾಗಿ ಎಷ್ಟುಬೇಕಾದರೂ ತಿಂದುಕೊಂಡು ಇರಬಹುದು, ಅಲ್ಲಿ ಯಾರೂ ನಿನ್ನನ್ನು ಕೇಳುವವರಿಲ್ಲ, ಪಾಪ ನಿನ್ನನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ, ನೀನು ಎಷ್ಟೊಂದು ಸೊರಗಿ ಹೋಗಿದ್ದಿ ಎಂದಾಗ ಸಂತೋಷಗೊಂಡ ಕತ್ತೆಯು ಹಾಗೇ ಆಗಲೀ ನೀನು ಬರುವುದನ್ನೇ ಎದುರು ನೋಡುತ್ತಿರುತ್ತೇನೆ ಎಂದು ಹೇಳಿ ನದಿಯತ್ತ ಹೊರಟಿತು.
ಇದನ್ನೆಲ್ಲಾ ದೂರದಿಂದಲೇ ನೋಡುತ್ತಿದ್ದ ಕಾಡು ನಾಯಿಯೊಂದು ಕತ್ತೆಯ ಹತ್ತಿರ ಬಂದು ನೋಡು ಆ ನರಿಯನ್ನು ನೀನು ಎಂದಿಗೂ ನಂಬಬೇಡ, ಅದು ಮೋಸಗಾರ ಈಗಲೇ ನನ್ನ ಜೊತೆ ಬಂದುಬಿಡು ಕತ್ತೆಗಳಿರುವ ಗುಂಪಿಗೆ ನಿನ್ನನ್ನು ಸುರಕ್ಷಿತವಾಗಿ ಸೇರಿಸುತ್ತೇನೆ ನನ್ನನ್ನು ನಂಬು ಎಂದಾಗ ಕತ್ತೆಯು ತನ್ನ ಮನದಲ್ಲಿ ಈ ಕಾಡು ನಾಯಿಯನ್ನು ನಂಬುವುದುಬೇಡ ತನ್ನ ಗುಂಪಿಗೆ ಕರೆದುಕೊಂಡು ಹೋಗಿ ನನ್ನ ಎಲ್ಲ ನಾಯಿಗಳ ಜೊತೆ ನನ್ನನ್ನೇ ತಿಂದುಬಿಟ್ಟರೆ ಏನುಮಾಡುವುದು, ಎಂದುಕೊಂಡು ಇಲ್ಲ ನಾನು ನಿನ್ನನ್ನು ನಂಬುವುದಿಲ್ಲ ನಾನು ಹೋಗುತ್ತೇನೆ ಎಂದಾಗ ನಾಯಿಯು ಕರೆದು ಬುದ್ಧಿಹೇಳಿದರೆ ಇಷ್ಟೇ ನಿನ್ನ ಹಣೆಬರಹ ಏನಾದರೂ ಮಾಡಿಕೊ ಎಂದುಕೊಳ್ಳುತ್ತಾ ಅಲ್ಲಿಂದ ಹೊರಟುಹೋಯಿತು.
ಅಂದು ರಾತ್ರಿ ಇತ್ತ ನರಿಯು ಚಿರತೆ ಬಳಿ ಹೋಗಿ ಇಂದು ರಾತ್ರಿ ನಿನಗೆ ಊರಕತ್ತೆ ತಂದುಕೊಡುವುದಾಗಿ ಹೇಳಿ ಒಂದು ಮರೆಯಲ್ಲಿ ಕಾಯುತ್ತಿರುವಂತೆ ಹೇಳಿ ಊರಿಗೆ ಬಂದಿತು ಮತ್ತು ಕತ್ತೆ ಇರುವಲ್ಲಿಗೆ ಹೋಗಿ ಅದರ ಹಗ್ಗವನ್ನು ಬಿಡಿಸಿ ಅಲ್ಲಿಂದ ಕಾಡಿಗೆ ಕರೆದುಕೊಂಡು ಹೋಯಿತು. ಕತ್ತೆಯು ತನಗೆ ಸ್ವತಂತ್ರ ಸಿಕ್ಕ ಖುಷಿಯಲ್ಲಿ ಇನ್ನು ಆನಂದದಿಂದ ಕಾಡಿನಲ್ಲಿ ಸ್ವಾತಂತ್ರ್ಯವಾಗಿ ಅಡ್ಡಾಡಿಕೊಂಡು ಇರಬಹುದು ಎಂದು ಮನಸಿನಲ್ಲಿ ಕನಸು ಕಾಣುತ್ತಾ ಬರುತ್ತಿತ್ತು, ಆದರೆ ಮರೆಯಲ್ಲಿ ಕಾಯುತ್ತಿದ್ದ ಚಿರತೆಯು ನರಿಯ ಜೊತೆ ಕತ್ತೆ ಬರುವುದನ್ನು ದೂರದಿಂದಲೇ ನೋಡಿ ಮರೆಯಲ್ಲಿ ನಿಂತು ಹತ್ತಿರ ಬರುತ್ತಿದ್ದಂತೆ ಒಮ್ಮಿಂದೊಮ್ಮೆ ಚಂಗನೆ ಕತ್ತೆಯ ಮೇಲೆ ಎರಗಿ ಕುತ್ತಿಗೆಗೆ ಬಾಯಿಹಾಕಿತು. ಇದ್ದಕ್ಕಿದ್ದಂತೆ ಆದ ತನ್ನ ಸ್ಥಿತಿಗೆ ನೊಂದ ಕತ್ತೆಯು ಈ ನರಿಯು ತನಗೆ ಮೋಸ ಎಂದು ಆಗ ತಿಳಿಯಿತು, ನಾನು ಆ ಕಾಡು ನಾಯಿಯ ಮಾತು ಕೇಳಬೇಕಿತ್ತು. ನಾನು ಒಳ್ಳೆಯವರ ಸಹವಾಸ ಮಾಡಿದ್ದರೆ ತನಗೆ ಇಂತಹ ದುರ್ಗತಿ ಬರುತ್ತಿರಲಿಲ್ಲ ಎಂದು ನೋವಿನಿಂದ ಚೀರಾಡಿತು.
ನೀತಿ: ತಮ್ಮ ಸ್ವಾರ್ಥಕ್ಕಾಗಿ ಬೇರೆಯವರನ್ನು ಬಲಿಕೊಡುವವರ ಸಂಖ್ಯೆಯೇ ಜಾಸ್ತಿ.

ಸಂಪಾದಕರ ನುಡಿ
ನಮಸ್ಕಾರ ಪ್ರೀತಿಪಾತ್ರ ಓದುಗರೆ,
ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ಯಾರು ಜೊತೆಗೂಡುತ್ತೇವೆ, ಅವರಿಂದ ನಾವು ಯಾವ ರೀತಿಯ ಪ್ರಭಾವವನ್ನು ಹೊಂದುತ್ತೇವೆ ಎಂಬುದು ಬಹಳ ಮುಖ್ಯವಾಗಿದೆ. “ದುಷ್ಟರ ಸಹವಾಸದ ಪರಿಣಾಮ” ಎಂಬ ಈ ಕಥೆ, ಮೋಸಗಾರರ ಮಾತುಗಳನ್ನು ನಂಬಿದಾಗ ಹೇಗೆ ಎದುರಾಗಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.
ಈ ಕಥೆಯಲ್ಲಿ ಕತ್ತೆಯು ತನ್ನ ಸ್ವಾತಂತ್ರ್ಯವನ್ನು ಹುಡುಕುವ ಪ್ರಯತ್ನದಲ್ಲಿ ಮೋಸಗಾರ ನರಿಯ ಮಾತು ನಂಬಿದ ಪರಿಣಾಮ ದುರಂತ ಎದುರಿಸುತ್ತದೆ. ಆದರೆ, ಅದನ್ನು ಎಚ್ಚರಿಸುವ ನಾಯಿ ಮಾತುಗಳನ್ನು ಮುಕ್ತಾಯವಾಗಿ ಕಡೆಗಣಿಸುತ್ತದೆ. ನಮ್ಮ ಜೀವನದಲ್ಲಿಯೂ ಇದೇ ಪರಿ, ಸುಳ್ಳುಮಾತುಗಳಿಗಿಂತ ನಿಜವಾದ ಸಹಾಯ ಮತ್ತು ಸಲಹೆಯನ್ನು ಗುರುತಿಸುವ ಜಾಣ್ಮೆ ಅವಶ್ಯಕ.
ನೀತಿ ಕಥೆಗಳು ನಮ್ಮ ಜೀವನದ ಮಾರ್ಗದರ್ಶನಕ್ಕೆ ಸಹಾಯಕವಾಗುತ್ತವೆ. ಈ ಕಥೆಯಿಂದ “ಉತ್ತಮ ಜನರ ಸಂಗತಿಯಲ್ಲಿ ಮುಂದುವರಿದರೆ ಪ್ರಗತಿ, ಆದರೆ ದುಷ್ಟರ ಸಹವಾಸದಲ್ಲಿ ನಾಶ” ಎಂಬ ಮಹತ್ವದ ಪಾಠವನ್ನು ಕಲಿಯಬಹುದು.
ನಮ್ಮ “ನಮ್ಮ ತುಮಕೂರು” ಓದುಗರಿಗೆ ಸದಾ ಪ್ರಾಮಾಣಿಕ, ಪ್ರಭಾವಶಾಲಿ ಮತ್ತು ಜೀವನೋಪಾಯ ಪಾಠ ನೀಡುವ ಉದಾಹರಣೆಗಳನ್ನು ನೀಡಲು ನಾವು ಸದಾ ಬದ್ಧ. ಈ ರೀತಿಯ ಹಲವಾರು ಪಾಠಪೂರಿತ ಕಥೆಗಳಿಗಾಗಿ ನಮ್ಮೊಂದಿಗೆ ಇರಿ!
— ಜಿ.ಎಲ್.ನಟರಾಜು, ಮುಖ್ಯ ಸಂಪಾದಕರು, ನಮ್ಮ ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4