ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದ ಎರಡನೇ ಮಹಡಿಯಿಂದ ಜಿಗಿದ 13 ವರ್ಷದ ಬಾಲಕಿ ದುರಂತ ಅಂತ್ಯ ಕಂಡಿದ್ದಾಳೆ. ಭಾನುವಾರ ಮಧ್ಯಪ್ರದೇಶದ ಸಾಗರ್ ನಗರದಲ್ಲಿ ಈ ಘಟನೆ ನಡೆದಿದೆ. ಬಾಲಕಿ ತಾನು ವಾಸವಿದ್ದ ಕಟ್ಟಡದ ನೆಲ ಮಹಡಿಯಲ್ಲಿ ಬೆಂಕಿ ವ್ಯಾಪಿಸಿದ್ದನ್ನು ಕಂಡು ಹೆದರಿ ಎರಡನೇ ಮಹಡಿಯಿಂದ ಜಿಗಿದಿದ್ದಾಳೆ.
ಏಂಜೆಲ್ ಜೈನ್ ಎಂಬ ಬಾಲಕಿ ಮೃತಪಟ್ಟಿದ್ದಾಳೆ. ಬಿದ್ದ ರಭಸಕ್ಕೆ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆಯ ಪ್ರಾಣ ಉಳಿಸಲಾಗಲಿಲ್ಲ. ಘಟನೆಯಲ್ಲಿ ಬಾಲಕಿಯ ಸಹೋದರ ಮತ್ತು ತಾಯಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.


