ಕಾರವಾರ: ವಿದ್ಯೆ ಕಲಿಸುವುದಷ್ಟೇ ಶಿಕ್ಷಣದ ಉದ್ದೇಶ ಅಲ್ಲ. ಮಕ್ಕಳನ್ನು ವಿಶ್ವ ಮಾನವರನ್ನಾಗಿ ರೂಪಿಸುವುದೂ ಶಿಕ್ಷಣದ ಗುರಿ. ಪ್ರತಿಯೊಬ್ಬರೂ ಉನ್ನತ ಸ್ಥಾನ ಪಡೆಯುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ನಗರಸಭೆಯ ಅಧ್ಯಕ್ಷ ರವಿರಾಜ ಅಂಕೋಲೆಕರ ಹೇಳಿದರು.
ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಉತ್ತರಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಾರವಾರ, ಕೆ.ಡಿ.ಸಿ.ಸಿ. ಬ್ಯಾಂಕ್ ಶಿರಸಿ (ಶಾಖೆ ಕಾರವಾರ) ಅಂಕೋಲಾ ಅರ್ಬನ್ ಕೋ. ಅಪರೇಟಿವ್ ಬ್ಯಾಂಕ್ ಅಂಕೋಲಾ ಶಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಕಾರವಾರ ತಾಲೂಕಿನ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಬೋಧನಾ ವೃತ್ತಿ ಅತ್ಯಂತ ಶ್ರೇಷ್ಟ್ರ ವೃತ್ತಿಗಳಲ್ಲಿ ಒಂದು ಎಂಬುದನ್ನು ಪರಿಗಣಿಸಿರುವ ದೇಶ ನಮ್ಮದು. ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದರ ಜತೆಗೆ ಸರಿ ತಪ್ಪುಗಳನ್ನು ತಿದ್ದುವ, ಅವರಲ್ಲಿನ ಆಸಕ್ತಿಗಳನ್ನು ವೃದ್ಧಿಸುವ ಮತ್ತು ಅವರ ಬದುಕಿಗೆ ಗುರಿ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು ಪ್ರಾಮಾಣಿಕವಾಗಿ ತಮ್ಮ ಕಾರ್ಯನಿರ್ವಹಿಸಬೇಕು, ಪ್ರತಿಯೊಬ್ಬರು ಉನ್ನತ ಮಟ್ಟದ ಸಾಧನೆ ಮಾಡುವಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ ಎಂದು ನಿವೃತ್ತ ಶಿಕ್ಷಕ ಆನಂದ ಘಡಕಾಂಬ್ಲೆ ಅನಿಸಿಕೆ ವ್ಯಕ್ತಪಡಿಸಿದರು.
ಸಿದ್ದರದ ಮಲ್ಲಿಕಾರ್ಜುನ ಪ.ಪೂ ಕಾಲೇಜ್ ನ ನಿವೃತ್ತ ಪ್ರಾಚಾರ್ಯರಾದ ಜಿ.ಡಿ.ಮನೋಜ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಕರು ಎದುರಿಸುವ ಸವಾಲುಗಳು ಕುರಿತು ಉಪನ್ಯಾಸ ನೀಡಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಾಗಿ, ತತ್ವಜ್ಞಾನಿ, ರಾಜಕಾರಣಿಯಾಗಿ ಅಪಾರ ಸೇವೆ ಸಲ್ಲಿಸಿದ್ದು, ಅವರ ಸಾಧನೆ ಆದರ್ಶ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಣ ಎಂದರು.
ಸಾಯಿ ಅನ್ನಪೂರ್ಣ ಟ್ರಸ್ಟ್ ಸಂಚಾಲಕ, ಉಪ ಸಮನ್ವಯ ಅಧಿಕಾರಿ ಭಾಸ್ಕರ್ ಗಾವಂಕರ್, ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಉಪಸಮನ್ವಯ ಅಧಿಕಾರಿ ನಾಗರಾಜ ಗೌಡ, ಅಂಕೋಲಾದ ಅರ್ಬನ ಕೋ-ಅಪರೇಟಿವ್ ಬ್ಯಾಂಕ ಉಪಾಧ್ಯಕ್ಷ ಗೋವಿಂದ್ರಾಯ ಕೃಷ್ಣ ನಾಯ್ಕ, ಡಯಟ್ ಕುಮಟಾದ ಉಪನ್ಯಾಸಕರ ಸುರೇಶ್ ಗಾವಂಕರ್, ಮಾಧ್ಯಮಿಕ ಶಾಲಾ ಶಿಕ್ಷಣ ಸಂಘದ ಅಧ್ಯಕ್ಷ ಜೈ ಮಂಜುನಾಥ, ಪ್ರಾಥಮಿಕ ಶಾಲಾ, ಶಿಕ್ಷಣ ಸಂಘದ ಅಧ್ಯಕ್ಷ ಆರ್.ಪಿ ಗೌಡ, ಕೆನರ ಬ್ಯಾಂಕ್ ಮ್ಯಾನೇಜರ್ ರಾಹುಲ್ ಸಾವಂತ್, ಮುಖ್ಯೋಪಾಧ್ಯಕ ಪ್ರಭಾಕರ್ ಚಿತ್ರಾಮನೆ ಹಾಗೂ ಮತ್ತಿತರರು ಇದ್ದರು.
ಕ್ಷೇತ್ರ ಶಿಕ್ಷಣಾದಿಕಾರಿ ಚಂದ್ರಹಾಸ ರಾಯ್ಕರ್ ಸ್ವಾಗತಿಸಿದರು, ಶಿಕ್ಷಕಿಯರಾದ ವನೀತಾ ಶೇಟ್ ಮತ್ತು ಗಂಗಾ ಭಟ್ ನಿರೂಪಿಸಿದರು, ದೈಹಿಕ ಶಿಕ್ಷಣ ಪರೀವಿಕ್ಷಕರು ವಿಠೋಬ್ ನಾಯ್ಕ ವಂದಿಸಿದರು.
ಕಾರ್ಯಕ್ರಮದಲ್ಲಿ, ನಿವೃತ್ತಿ ಹೊಂದಿದ ಕಿರಿಯ, ಹಿರಿಯ, ಪ್ರಾಥಮಿಕ, ಪ್ರೌಡ ಶಾಲಾ ವಿಭಾಗದ ನಿವೃತ್ತ ಶಿಕ್ಷಕರಿಗೆ ಹಾಗೂ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಿದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q