ಸರಗೂರು: ಸರಕಾರಿ ಭೂಮಿಗೆ ವಾರಸುದಾರರಾಗಿರುವ ಬಡ ರೈತರಿಗೆ ಸರಕಾರ ಹಕ್ಕು ನೀಡುವ ಮೂಲಕ ಅವರನ್ನು ಬದುಕಲು ಬಿಡಬೇಕು ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಕ್ಷೇತ್ರ ಮಟ್ಟದ ಉಪಾಧ್ಯಕ್ಷ ಬಸವರಾಜಪ್ಪ ಹೇಳಿದರು.
ತಾಲೂಕಿನ ಮನುಗನಹಳ್ಳಿ ಗ್ರಾಮ ಪಂಚಾಯಿತಿ ಮನುಗನಹಳ್ಳಿ ಗ್ರಾಮದ ಬಸವರಾಜಪ್ಪ ಎಂಬುವರ ಜಮೀನಿನಲ್ಲಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವತಿಯಿಂದ ಶನಿವಾರ ದಂದು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಸುಮಾರು ಏಳು ವರ್ಷಗಳ ಹಿಂದೆಯೇ ಬಗರ್ ಹುಕುಂ ಸಮಿತಿ ರಚಿಸಲಾಗಿತ್ತು. ಇದರಲ್ಲಿ ಮನುಗನಹಳ್ಳಿ ಲಂಕೆ ಹುನಗಹಳ್ಳಿ ಭಾಗದ 103 ಫಲಾನುಭವಿಗಳ ಪೈಕಿ 50 ಫಲಾನುಭವಿಗಳಿಗೆ ಸಾಗುವಳಿ ಚೀಟಿ ಮಂಜೂರು ಮಾಡಲಾಗಿದೆ. ಆದರೂ ಏಳು ವರ್ಷಗಳಿಂದ ಇನ್ನೊಂದು ಕಮಿಟಿ ರಚಿಸಿ, ಪಹಣಿ ಕೊಡಿಸುವ ಕೆಲಸ ಮಾಡದೆ ಮೀನಮೇಷ ಎಣಿಸಲಾಗುತ್ತಿದೆ ಎಂದು ದೂರಿದರು.
ಅರ್ಹರಿಗೆ ಅನ್ಯಾಯವಾಗದಿರಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಂತಹ ರೈತರ ಬಗ್ಗೆ ಗಮನಹರಿಸದೆ ತಮ್ಮ ಪಾಡಿಗೆ ಇದ್ದಾರೆ. ಈಗ ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಡಿ–ಫಾರೆಸ್ಟ್ ಎಂಬ ಪಟ್ಟ ಕಟ್ಟಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಏಳು ವರ್ಷಗಳ ಹಿಂದೆಯೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಂಡಿದ್ದರೆ ಇಂದು ರೈತರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಗುಡುಗಿದರು. ಸರ್ಕಾರವು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇನ್ನಾದರೂ ಅರ್ಹ ರೈತರಿಗೆ, ಅನ್ನದಾತರಿಗೆ ಮೋಸ ಮಾಡದೆ ಪರಿಶೀಲಿಸಿ ಜಮೀನನ್ನು ಅವರ ಹೆಸರಿಗೆ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಮಹಿಳೆಯ ಸುಮಾರು ವರ್ಷಗಳಿಂದ ಸರ್ವೇ ನಂ.36ರ ಮೂರು ಎಕರೆ ಜಮೀನಲ್ಲಿ ಬೆಳೆ ಬೆಳೆದು ಬದುಕು ಸಾಗಿಸುತ್ತಿದ್ದೇವೆ. ಇತ್ತೀಚೆಗೆ ಅಕ್ಕಪಕ್ಕದ ಜಮೀನಿನವರು ಅರ್ಧ ಎಕರೆ ಜಮೀನನ್ನು ಬೇರೆಯವರಿಗೆ ಮಾರಿದ್ದರು. ಅದನ್ನು ಖರೀದಿಸಿದವರು ಈಗ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಮದ್ಯಪಾನ ಮಾಡಿ ಇದು ನಿಮ್ಮ ಜಮೀನಲ್ಲ ಎಂದು ಜಗಳ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ನಮಗೆ ನ್ಯಾಯ ಕೊಡಿಸಬೇಕೆಂದು ಅಳಲು ತೋಡಿಕೊಂಡರು.
ಸರಕಾರಗಳು ಬಡವರ ಪರವಿಲ್ಲ. ಕೇವಲ ತೋರಿಕೆಗೆ ಮಾತ್ರ ರೈತರ ಪರ ಎನ್ನುತ್ತಿವೆ, ನೈಜವಾಗಿ ಯಾವುದೇ ನೆರವು ನೀಡುತ್ತಿಲ್ಲ. ದಶಕಗಳಿಂದ ಉಳುವ ಭೂಮಿಯನ್ನೇ ನೆಚ್ಚಿಕೊಂಡು ಅನೇಕ ರೈತ ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ ಸರಕಾರ ಹಕ್ಕು ಪತ್ರ ನೀಡದಿರುವುದರಿಂದ ಆತಂಕದಲ್ಲಿ ಬದುಕುವ ಸ್ಥಿತಿ ಉಂಟಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಸಂಯೋಜಕರಾದ ಗೋಪಾಲ್, ಶಿವರಾಜು, ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘ ಅಧ್ಯಕ್ಷ ವೀರಭದ್ರಪ್ಪ, ವೇದಿಕೆ ನಿರ್ದೇಶಕರು ಶಿವಮೂರ್ತಿ, ಸುಂದರರಾಜ್, ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


