ಬೆಂಗಳೂರು: ಕನ್ನಡ ನಾಡಿನ ಪ್ರಸಿದ್ಧ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಅನಾರೋಗ್ಯವಾಗಿದ್ದು, ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿರುವುದಾಗಿ ಅವರ ಆಪ್ತ ವಲಯ ತಿಳಿಸಿದೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಶೂಟಿಂಗ್ ನಲ್ಲಿ ಮಳೆಯಲ್ಲಿ ನೆನೆದಿದ್ದರಿಂದ ಹೆಚ್ಚು ಸುಸ್ತು ಕಂಡು ಬಂದಿತ್ತು. ಅವರಿಗೆ ಸುಸ್ತಾಗುತ್ತಿದ್ದಂತೆಯೇ ಕೂಡಲೇ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ ಕಾಣಿಸಿಕೊಂಡಿದ್ದರಿಂದ ವೈದ್ಯರು ಅವರಿಗೆ ನಿನ್ನೆಯೇ ಚಿಕಿತ್ಸೆ ನೀಡಿ, ಮನೆಗೆ ಕಳುಹಿಸಿದ್ದಾರೆ.
ಸದ್ಯ ಮನೆಯಲ್ಲಿ ಶಿವಣ್ಣ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರ ತಪಾಸಣೆ ನಂತರ ಆತಂಕ ಪಡುವಂಥಹದ್ದೇನಿಲ್ಲ ಎನ್ನಲಾಗಿದೆ. ಈ ಹಿಂದೆ ಶಿವಣ್ಣಗೆ ಹೃದಯ ಸಂಬಂಧಿ ಸಮಸ್ಯೆ ಎದುರಾಗಿತ್ತು. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಆತಂಕ ಮೂಡಿತ್ತು.


